ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ಗೆ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಪಪ್ರಚಾರ, ಸುಳ್ಳು ಹಾಗೂ ಗೊಂದಲ ಸೃಷ್ಟಿಸುವುದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
‘ದಿಶಾ’ ಸಭೆಗೂ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಿರುವುದನ್ನು ಸಹಿಸಲಾಗದೆ ಕಾಂಗ್ರೆಸ್ ಎಲ್ಲಾ ರೀತಿಯ ಅಪಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಎಸ್ಐಆರ್ ದುರ್ಬಳಕೆಯಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್ಐಆರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ವಿರುದ್ಧ ಕಾಂಗ್ರೆಸ್ ವಿನಾ ಕಾರಣ ಎಫ್ಐಆರ್ ದಾಖಲಿಸುತ್ತಿದೆ. ಫಾರ್ಮ್ ನಂ.7 ಸಲ್ಲಿಸುವುದರಲ್ಲಿ ತಪ್ಪೇನಿದೆ? ಅದು ಕೇವಲ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯಾಗಿದೆ. “ನನ್ನ ಮೇಲೂ ಯಾರಾದರೂ ಫಾರ್ಮ್ ನಂ.7 ಸಲ್ಲಿಸಬಹುದು. ನಾನು ಮತದಾರನಲ್ಲ ಎಂದು ಆಕ್ಷೇಪಣೆ ಸಲ್ಲಿಸಬಹುದು. ಅದು ಸತ್ಯವೋ, ಸುಳ್ಳೋ ಎಂಬುದನ್ನು ಚುನಾವಣಾ ಆಯೋಗ ಪರಿಶೀಲಿಸುತ್ತದೆ. ಇದರಲ್ಲಿ ತಪ್ಪೇನಿದೆ?” ಫಾರ್ಮ್ಗಳನ್ನು ಸ್ವೀಕರಿಸುವವರು ಚುನಾವಣಾ ಆಯೋಗದ ಅಧಿಕಾರಿಗಳೇ ಅಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೆ, ರಾಜ್ಯ ಸರ್ಕಾರದ ಸಹಕಾರದೊಂದಿಗೆ ಚುನಾವಣಾ ಆಯೋಗವೇ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದೆ. ಸರಿಯಾದ ರೀತಿಯಲ್ಲಿ ಚುನಾವಣೆ ಎದುರಿಸುವ ಸಾಮರ್ಥ್ಯ ಇಲ್ಲದ ಕಾರಣ ಕಾಂಗ್ರೆಸ್ ಈ ರೀತಿಯ ಗೊಂದಲ ಸೃಷ್ಟಿಸುತ್ತಿದೆ ಎಂದು ಯದುವೀರ್ ಆರೋಪಿಸಿದರು.
ಇದನ್ನೂ ಓದಿ
ದೇಶದಲ್ಲಿ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಅರಾಜಕತೆ ಮತ್ತು ಆತಂಕದ ವಾತಾವರಣ ಸೃಷ್ಟಿಸುತ್ತಿವೆ ಎಂದು ಆರೋಪಿಸಿದ ಅವರು, ಭವಿಷ್ಯದಲ್ಲಿ ಇಂತಹ ಆತಂಕಕ್ಕೆ ಕಾರಣವಾಗುವವರ ವಿರುದ್ಧ ಸೂಕ್ತ ಉತ್ತರ ನೀಡಬೇಕಿದೆ ಎಂದರು.
ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್ ಅವರು, ಆರೋಪಗಳನ್ನು ಯಾರು ಹೇಗೆ ಬೇಕಾದರೂ ಮಾಡಬಹುದು. ಆದರೆ ಅದಕ್ಕೆ ಸಾಕ್ಷ್ಯ ನೀಡಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡುವಾಗ ದಾಖಲೆಗಳನ್ನು ಇಟ್ಟು ಮಾತನಾಡಬೇಕು ಎಂದು ಹೇಳಿದರು.
ಕಂಬಳಕ್ಕೆ ವಿರೋಧ:
ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆ ವಿಚಾರದ ವಿವಾದದ ಕುರಿತು ಪ್ರತಿಕ್ರಿಯಿಸಿದ ಯದುವೀರ್, ದಸರಾ ಸಂದರ್ಭದ ಕಂಬಳಕ್ಕೆ ಮೈಸೂರು ನಿವಾಸಿಗಳೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕಂಬಳ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.



