ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವೈಭವದ ಆಚರಣೆಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು, ಅ. 11 ರಿಂದ 21 ರವರೆಗೆ ನಡೆಯಲಿರುವ ಈ ಹತ್ತು ದಿನಗಳ ದಸರಾ ಸಂಭ್ರಮದ ಅವಧಿಯಲ್ಲಿ ನಗರದ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಮೈಸೂರು ನಗರ ಪೊಲೀಸ್ ಇಲಾಖೆಯು ವಿಶೇಷ ಸಂಚಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಅರಮನೆಯ ಸುತ್ತಮುತ್ತ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಕಟ್ಟುನಿಟ್ಟಿನ ಏಕಮುಖ ಸಂಚಾರ ಮತ್ತು ಪ್ರಮುಖ ರಸ್ತೆಗಳಲ್ಲಿ ನೋ-ಪಾರ್ಕಿಂಗ್ ನಿಯಮವನ್ನು ಜಾರಿಗೆ ತರಲಾಗಿದೆ.
ಅರಮನೆ ಸುತ್ತ ‘ಆಂಟಿ-ಕ್ಲಾಕ್‌ವೈಸ್’ ಸಂಚಾರ ಕಡ್ಡಾಯ
ನಗರ ಕೇಂದ್ರಭಾಗದಲ್ಲಿ ವಾಹನ ದಟ್ಟಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅರಮನೆಯ ಕಡೆಗೆ ಬರುವ ವಾಹನಗಳಿಗೆ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧವಾಗಿ ಚಲಿಸಲು ಮಾತ್ರ ಅವಕಾಶ ನೀಡಲಾಗಿದೆ. ವಾಹನ ಸವಾರರು ಕಡ್ಡಾಯವಾಗಿ ಈ ನಿರ್ದಿಷ್ಟ ಮಾರ್ಗವನ್ನು ಅನುಸರಿಸಬೇಕು.
ಜೆಎಸ್‌ಎಸ್ ವೃತ್ತ, ಕುಸ್ತಿ ಅಖಾಡ ಜಂಕ್ಷನ್, ಬಿ.ಎನ್. ರಸ್ತೆ, ಹಾರ್ಡಿಂಜ್ ವೃತ್ತ, ಎ.ವಿ. ರಸ್ತೆ, ಕೆ.ಆರ್. ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಪಾಠಶಾಲಾ ವೃತ್ತ, ಚಾಮರಾಜ ರಸ್ತೆ ಈ ನಿಗದಿತ ದಿಕ್ಕಿಗೆ ವಿರುದ್ಧವಾಗಿ ಚಲಿಸುವ ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಈ ರಸ್ತೆಗಳಲ್ಲಿ ನೋ ಪಾರ್ಕಿಂಗ್
ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವ ರಸ್ತೆ ಬದಿಯ ಪಾರ್ಕಿಂಗ್ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದೆ. ಪ್ರಮುಖವಾಗಿ ಸಯ್ಯಾಜಿರಾವ್ ರಸ್ತೆ ಹಾಗೂ ಮೈಸೂರು ವಸ್ತುಪ್ರದರ್ಶನದ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಸಂಪೂರ್ಣವಾಗಿ ವಾಹನ ನಿಲುಗಡೆಯನ್ನು ಬ್ಯಾನ್ ಮಾಡಲಾಗಿದೆ. ಇದರೊಂದಿಗೆ ಬನುಮಯ್ಯ ರಸ್ತೆ, ತ್ಯಾಗರಾಜ ರಸ್ತೆ, ಲೋಕರಂಜನ್ ರಸ್ತೆ, ಚಂದ್ರಗುಪ್ತ ರಸ್ತೆ ಮತ್ತು ಶಾಲಿವಾಹನ ರಸ್ತೆಗಳಲ್ಲೂ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ.
ಜಂಬೂಸವಾರಿ ದಿನ ಅರಮನೆ ಮತ್ತು ಬಿ.ಎನ್ ರಸ್ತೆಗಳು ಬಂದ್
ಅ. 21 ರಂದು ಜಂಬೂಸವಾರಿ ಮೆರವಣಿಗೆ ಸಾಗುವ ಅರಮನೆಯಿಂದ ಬನ್ನಿಮಂಟಪದವರೆಗಿನ ಇಡೀ ಮಾರ್ಗವನ್ನು ರಕ್ಷಣಾ ವಲಯವನ್ನಾಗಿ ಪ್ರಕಟಿಸಲಾಗಿದೆ. ಬಲರಾಮ ದ್ವಾರ, ಎ.ವಿ. ರಸ್ತೆ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಬಂಬೂಬಜಾರ್ ಹಾಗೂ ಹೈವೇ ಹೋಟೆಲ್ ವೃತ್ತದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ವಾಹನ ನಿಲ್ಲಿಸುವಂತಿಲ್ಲ. ಅಂದು ಬೆಳಗ್ಗೆ 11 ಗಂಟೆಯಿಂದಲೇ ಅಶೋಕ ರಸ್ತೆ, ಬಿ.ಎನ್. ರಸ್ತೆ ಹಾಗೂ ಅರಮನೆ ಸುತ್ತಲಿನ ರಸ್ತೆಗಳಿಗೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ.
ಸರಕು ವಾಹನಗಳ ಪ್ರವೇಶ ನಿಷೇಧ
ದಸರಾ ರಶ್ ಹಿನ್ನೆಲೆಯಲ್ಲಿ ಬೆಂಗಳೂರು, ನಂಜನಗೂಡು, ಟಿ. ನರಸೀಪುರ, ಬನ್ನೂರು, ಕೆ.ಆರ್.ಎಸ್., ಹುಣಸೂರು, ಬೋಗಾದಿ ಮತ್ತು ಎಚ್.ಡಿ. ಕೋಟೆ ಮಾರ್ಗಗಳಿಂದ ನಗರದೊಳಗೆ ಬರುವ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪರ್ಯಾಯ ಬೈಪಾಸ್ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.
ಪ್ರವಾಸಿಗರಿಗೆ ಉಚಿತ ಶಟಲ್ ಬಸ್ ವ್ಯವಸ್ಥೆ
ದಸರಾ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಹೊರವಲಯದ 12 ಆಯಕಟ್ಟಿನ ಕೇಂದ್ರಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ನಗರ ಕೇಂದ್ರಕ್ಕೆ ಬರಲು ಉಚಿತ ಶಟಲ್ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯಾವುದೇ ತುರ್ತು ಮಾಹಿತಿ ಅಥವಾ ಸಹಾಯಕ್ಕಾಗಿ ದಸರಾ ಸಹಾಯವಾಣಿ ಸಂಖ್ಯೆ 1077 ಅಥವಾ ಪ್ರವಾಸಿ ಪೊಲೀಸ್ ಸಂಖ್ಯೆ 0821-2418111 ಅನ್ನು ಸಂಪರ್ಕಿಸಬಹುದಾಗಿದೆ.



