ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕಿತ್ಸಾ ವೆಚ್ಚದ ಪೂರ್ಣ ಬಿಲ್ ಪಾವತಿಸದ ಹೊರತು ಶವ ನೀಡುವುದಿಲ್ಲ ಎಂದು ಸತಾಯಿಸುವ ಖಾಸಗಿ ಆಸ್ಪತ್ರೆಗಳ ಧೋರಣೆಗೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಸಜ್ಜಾಗಿದೆ.
ಹಣಕ್ಕಾಗಿ ಹೆಣವನ್ನು ಒತ್ತೆಯಿಟ್ಟುಕೊಳ್ಳುವ ಆಸ್ಪತ್ರೆಗಳ ಮಾಲೀಕರ ವಿರುದ್ಧ ನೇರವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಹಳೆಯ ಕಾಯ್ದೆಗಳ ವೈಫಲ್ಯವನ್ನು ಸರಿಪಡಿಸಿ ಸಾರ್ವಜನಿಕರ ಹಿತ ಕಾಯುವ ನಿಟ್ಟಿನಲ್ಲಿ ಈ ಕ್ರಾಂತಿಕಾರಿ ಕಾನೂನು ರೂಪಿಸಲಾಗುತ್ತಿದೆ.
ಹಳೆಯ ಕಾನೂನಿನ ಲೋಪದೋಷ ನಿವಾರಣೆಗೆ ಸಚಿವರ ಪಣ
ಈ ಮಹತ್ವದ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್, “2007 ಮತ್ತು 2018 ರ ಅವಧಿಯಲ್ಲೇ ಇಂತಹ ಕಾನೂನುಗಳನ್ನು ತರಲಾಗಿದ್ದರೂ ಅವುಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. 2018 ರ ನಿಯಮದ ಪ್ರಕಾರ ಶ್ಯೂರಿಟಿ ಪಡೆದು ಮೃತದೇಹ ನೀಡಬೇಕು ಹಾಗೂ ಬಿಲ್ ಪಾವತಿಸದಿದ್ದರೆ ಆಸ್ಪತ್ರೆಯವರು ಗ್ರಾಹಕರ ಮೇಲೆ ಕೋರ್ಟ್‌ನಲ್ಲಿ ಕೇಸ್ ಹಾಕಬಹುದು ಎಂಬ ಸಡಿಲಿಕೆ ಇತ್ತು. ಆದರೆ ಬಡ ಜನರು ಕಾನೂನು ಹೋರಾಟದ ಭೀತಿಯಿಂದಾಗಿ ಸಾಲಸೋಲ ಮಾಡಿ ದುಡ್ಡು ಕಟ್ಟುತ್ತಿದ್ದಾರೆ. ಇದನ್ನು ಬದಲಾಯಿಸಿ ಶೇ.100 ರಷ್ಟು ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲು ನಾನು ಬದ್ಧನಾಗಿದ್ದೇನೆ. ಆಸ್ಪತ್ರೆಗಳ ಸಂಘಟನೆಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಖಾಸಗಿ ಆಸ್ಪತ್ರೆಗಳ ಒಕ್ಕೂಟದ ತೀವ್ರ ಆತಂಕ
ಸರ್ಕಾರದ ಈ ಹಠಾತ್ ನಿರ್ಧಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಆತಂಕ ಹಂಚಿಕೊಂಡಿರುವ ಒಕ್ಕೂಟದ ಅಧ್ಯಕ್ಷೆ ಡಾ. ಶೋಭಾ ಪ್ರಕಾಶ್, ಐಸಿಯು ಚಿಕಿತ್ಸೆ, ದುಬಾರಿ ಜೀವರಕ್ಷಕ ಔಷಧಗಳು ಹಾಗೂ ವೈದ್ಯಕೀಯ ಪರಿಕರಗಳನ್ನು ಬಳಸಿದ ನಂತರ, ಸಾವು ಸಂಭವಿಸಿದೆ ಎಂಬ ಕಾರಣಕ್ಕೆ ಬಿಲ್ ಇಲ್ಲದೆ ಮೃತದೇಹವನ್ನು ಬಿಟ್ಟುಕೊಡಿ ಎಂದರೆ ಆಸ್ಪತ್ರೆಗಳು ಆರ್ಥಿಕವಾಗಿ ನಷ್ಟ ಅನುಭವಿಸುತ್ತವೆ. ಸಚಿವರ ಮಾನವೀಯ ದೃಷ್ಟಿಕೋನವನ್ನು ನಾವು ಸ್ವಾಗತಿಸುತ್ತೇವೆ, ಆದರೆ ಇಂತಹ ನಷ್ಟವನ್ನು ಸರಿದೂಗಿಸಲು ಸರ್ಕಾರ ನಮಗೆ ಪರ್ಯಾಯ ಆರ್ಥಿಕ ಭದ್ರತೆಯ ಮಾರ್ಗವನ್ನು ತೋರಿಸಬೇಕು. ಈ ಕರಡು ನಿಯಮವನ್ನು ಜಾರಿಗೆ ತರುವ ಮುನ್ನ ನಮ್ಮ ಅಹವಾಲನ್ನು ಆಲಿಸಬೇಕು ಎಂದು ಮನವಿ ಮಾಡಿದ್ದಾರೆ.



