ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ವರ್ಷಗಳಿಂದ ಪ್ರೀತಿಸಿ ಬೇರೆ ಯಾರದ್ದೋ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡ ಯುವತಿಯನ್ನು ಪ್ರಿಯಕರನೊಬ್ಬ ಜಲಪಾತದಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ಆರೋಪಿ ಶ್ರೀಪಾದ್ ವಾದರ್ ಹಾಗೂ ತರನ್ನಮ್ ಬಶೀರ್ ನಾಯ್ಕ್ ಐದು ವರ್ಷಗಳಿಂದ ಪ್ರೀತಿಯಲ್ಲಿದ್ದರು.ಆದರೆ ನಾಲ್ಕು ತಿಂಗಳ ಹಿಂದೆ ತರನ್ನಮ್ಗೆ ಬೇರೆಯ ಹುಡುಗನ ಜೊತೆ ನಿಶ್ಚಿತಾರ್ಥವಾಗಿತ್ತು. ತದನಂತರ ಶ್ರೀಪಾದ್ ಜೊತೆ ಆಕೆ ಬ್ರೇಕಪ್ ಮಾಡಿಕೊಂಡಿದ್ದರು. ಐದು ವರ್ಷ ಪ್ರೀತಿಸಿ ಇನ್ಯಾರನ್ನೋ ಮದುವೆಯಾಗಲು ಬ್ರೇಕಪ್ ಮಾಡಿಕೊಂಡಿದ್ದಾಳೆ ಎಂದು ಶ್ರೀಪಾದ್ ಗರಂ ಆಗಿದ್ದ. ಮದುವೆಗೂ ಮೊದಲು ಕೊನೆಯ ಬಾರಿ ಭೇಟಿಯಾಗೋಣ ಎಂದು ಆಕೆಯನ್ನು ಪಾಟಗಾಂವ್ ಬಳಿಯ ಪ್ರವಾಸಿ ತಾಣಕ್ಕೆ ಕರೆದೊಯ್ದಿದ್ದಾನೆ.
ಮಾತುಕತೆಯ ನಂತರ ಆತನನ್ನು ಮದುವೆಯಾಗಬೇಡ, ನನ್ನನ್ನೇ ಮದುವೆಯಾಗು ಎಂದು ಒತ್ತಾಯಿಸಿದ್ದಾನೆ. ಆಕೆ ಆಗಿದ್ದು ಆಗಿ ಹೋಗಿದೆ, ಈಗ ಮದುವೆಯಾಗಲು ಆಗುವುದಿಲ್ಲ ಎಂದಿದ್ದಾಳೆ. ಜಗಳ ತಾರಕಕ್ಕೇರಿ ಶ್ರೀಪಾದ್ ಆಕೆಯನ್ನು ಜಲಪಾತದಿಂದ ತಳ್ಳಿದ್ದಾನೆ. ನಂತರ ನಾನು ಬೈಕ್ ನಿಲ್ಲಿಸಿ ನೀರು ತರಲು ಹೋಗಿದ್ದೆ ಆಗಿನಿಂದ ತರನ್ನಮ್ ಕಾಣಿಸುತ್ತಿಲ್ಲ ಎಂದು ನಾಟಕ ಆಡಿದ್ದಾನೆ. ಆದರೆ ಆರೋಪಿಯ ಗೊಂದಲದ ನಡವಳಿಕೆಯಿಂದ ಪೊಲೀಸರಿಗೆ ಅನುಮಾನ ಬಂದಿದೆ. ಇಬ್ಬರ ಮೊಬೈಲ್ ಚಾಟ್ಗಳನ್ನು ಪರಿಶೀಲಿಸಿದಾಗ ಸತ್ಯ ಹೊರಬಿದ್ದಿದೆ.
ವಿಚಾರಣೆಯಲ್ಲಿ ಆರೋಪಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಂಬೋಲಿಯ ಸಹ್ಯಾದ್ರಿ ರಕ್ಷಣಾ ತಂಡದ ನೆರವಿನಿಂದ ಪೊಲೀಸರು ಕಣಿವೆಯಿಂದ ತರನ್ನಮ್ ಶವವನ್ನು ಹೊರತೆಗೆದಿದ್ದಾರೆ.
ಆರೋಪಿ ಶ್ರೀಪಾದ್ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆತನನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಮಧ್ಯೆ, ತರನ್ನಮ್ ಮತ್ತು ಆರೋಪಿಯ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತರನ್ನಮ್ ಸಾವಿಗೆ ನಿಖರ ಕಾರಣವನ್ನು ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿದ್ದಾರೆ.



