May 11, 2026
Monday, May 11, 2026
spot_img

ಅಮೆರಿಕ-ಚೀನಾ ಬಾಂಧವ್ಯದಲ್ಲಿ ಹೊಸ ಅಧ್ಯಾಯ? ಸುಂಕದ ಸಮರಕ್ಕೆ ಬ್ರೇಕ್ ಹಾಕಲು ಟ್ರಂಪ್ ಮಾಸ್ಟರ್ ಪ್ಲಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಮಟ್ಟದಲ್ಲಿ ಯುದ್ಧ ಮತ್ತು ಇಂಧನ ಬಿಕ್ಕಟ್ಟು ತಲೆದೋರಿರುವ ಈ ಸಂದಿಗ್ಧ ಸಮಯದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾಕ್ಕೆ ಮೂರು ದಿನಗಳ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಸುಮಾರು ಒಂದು ದಶಕದ ಬಳಿಕ ಅಮೆರಿಕದ ರಾಷ್ಟ್ರಪ್ರಧಾನಿಯೊಬ್ಬರು ಚೀನಾಕ್ಕೆ ಭೇಟಿ ನೀಡುತ್ತಿರುವುದು ಇಡೀ ವಿಶ್ವದ ಗಮನ ಸೆಳೆದಿದೆ.

ಪ್ರಸ್ತುತ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿದೆ. ಇದರಿಂದಾಗಿ ಜಾಗತಿಕವಾಗಿ ಪೆಟ್ರೋಲಿಯಂ ಮತ್ತು ಅನಿಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಯುದ್ಧದ ತೀವ್ರತೆಯನ್ನು ತಗ್ಗಿಸುವ ಮತ್ತು ತೈವಾನ್ ವಿಚಾರದಲ್ಲಿ ಹದಗೆಟ್ಟಿರುವ ಅಮೆರಿಕ-ಚೀನಾ ಸಂಬಂಧವನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ಸಭೆ ಫಲಪ್ರದವಾಗುವ ನಿರೀಕ್ಷೆಯಿದೆ.

ಭೇಟಿಯ ವೇಳಾಪಟ್ಟಿ:

(ಮೇ 13): ಟ್ರಂಪ್ ಬೀಜಿಂಗ್ ತಲುಪಲಿದ್ದಾರೆ.

(ಮೇ 14): ಕ್ಸಿ ಜಿನ್‌ಪಿಂಗ್ ಜೊತೆ ದ್ವಿಪಕ್ಷೀಯ ಮಾತುಕತೆ, ಸ್ವಾಗತ ಸಮಾರಂಭ ಮತ್ತು ಐತಿಹಾಸಿಕ ‘ಟೆಂಪಲ್ ಆಫ್ ಹೆವನ್’ ವೀಕ್ಷಣೆ. ಸಂಜೆ ವಿಶೇಷ ಸರ್ಕಾರಿ ಔತಣಕೂಟ.

(ಮೇ 15): ಉಭಯ ನಾಯಕರಿಂದ ಕಾರ್ಯನಿರತ ಮಧ್ಯಾಹ್ನದ ಊಟ ಮತ್ತು ಚಹಾ ಕೂಟದ ನಡುವೆ ಮುಂದುವರಿದ ಚರ್ಚೆಗಳು.

ಟ್ರಂಪ್ ಆಗಮನಕ್ಕೂ ಮುನ್ನ ಮೇ 12-13 ರಂದು ದಕ್ಷಿಣ ಕೊರಿಯಾದಲ್ಲಿ ಚೀನಾದ ಉಪ-ಪ್ರೀಮಿಯರ್ ಹೆ ಲಿಫೆಂಗ್ ಮತ್ತು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ನಡುವೆ ಮಹತ್ವದ ವ್ಯಾಪಾರ ಮಾತುಕತೆ ನಡೆಯಲಿದೆ. ಅಮೆರಿಕ ವಿಧಿಸಿರುವ ಆಮದು ಸುಂಕಗಳ ಕುರಿತು ದೊಡ್ಡ ಮಟ್ಟದ ರಾಜಿ ಅಥವಾ ಒಪ್ಪಂದವಾಗುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !