ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಮೇಲಿನ ಮಿಲಿಟರಿ ಕಾರ್ಯಾಚರಣೆ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಾಳೆ ಅತ್ಯಂತ ನಿರ್ಣಾಯಕ ದಿನ. ಕಾಂಗ್ರೆಸ್ (ಅಮೆರಿಕ ಸಂಸತ್ತು) ಅನುಮತಿಯಿಲ್ಲದೆ ಆರಂಭಿಸಲಾದ ಈ ಯುದ್ಧಕ್ಕೆ ಕಾನೂನಾತ್ಮಕವಾಗಿ ಅನ್ವಯವಾಗುವ 60 ದಿನಗಳ ಕಾಲಮಿತಿ ನಾಳೆಗೆ (ಮೇ 1) ಪೂರ್ಣಗೊಳ್ಳುತ್ತಿದೆ.
1973ರ ಈ ಕಾಯ್ದೆಯು ಅಮೆರಿಕ ಅಧ್ಯಕ್ಷರಿಗೆ ತುರ್ತು ಸಂದರ್ಭದಲ್ಲಿ ಸಂಸತ್ತಿನ ಪೂರ್ವಾನುಮತಿಯಿಲ್ಲದೆ ಸೈನ್ಯವನ್ನು ಬಳಸಲು ಅಧಿಕಾರ ನೀಡುತ್ತದೆ. ಆದರೆ ಇದಕ್ಕೆ ಎರಡು ಮುಖ್ಯ ನಿಬಂಧನೆಗಳಿವೆ:
ಕಾರ್ಯಾಚರಣೆ ಆರಂಭಿಸಿದ 48 ಗಂಟೆಗಳ ಒಳಗೆ ಕಾಂಗ್ರೆಸ್‌ಗೆ ಅಧಿಕೃತ ವರದಿ ನೀಡಬೇಕು.
ಕಾರ್ಯಾಚರಣೆ ಆರಂಭವಾದ 60 ದಿನಗಳ ಒಳಗೆ ಸಂಸತ್ತಿನ ಅಧಿಕೃತ ಅನುಮೋದನೆ ಪಡೆಯಬೇಕು. ಒಂದು ವೇಳೆ ಸಂಸತ್ತು ಅನುಮೋದನೆ ನೀಡದಿದ್ದರೆ, ಅಧ್ಯಕ್ಷರು ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ.
ಫೆಬ್ರವರಿ 28, 2026 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನಲ್ಲಿ ಭಾರಿ ದಾಳಿ ನಡೆಸಿದ್ದವು. ಇರಾನ್‌ನ ಪರಮಾಣು ಕೇಂದ್ರಗಳು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯ ಬಗ್ಗೆ ಮಾರ್ಚ್ 2 ರಂದು ಟ್ರಂಪ್ ಆಡಳಿತವು ಕಾಂಗ್ರೆಸ್‌ಗೆ ಅಧಿಕೃತ ಮಾಹಿತಿ ನೀಡಿತ್ತು. ಅಂದಿನಿಂದ ಆರಂಭವಾದ 60 ದಿನಗಳ ಗಡುವು ಇದೀಗ ಮುಕ್ತಾಯದ ಹಂತ ತಲುಪಿದೆ.
ಸದ್ಯ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕ ಕದನ ವಿರಾಮ ಜಾರಿಯಲ್ಲಿದ್ದರೂ, ಅಮೆರಿಕದ ನೌಕಾಪಡೆಗಳು ಇರಾನ್‌ನ ಕಡಲ ತೀರದಲ್ಲಿ ದಿಗ್ಬಂಧನ ಮುಂದುವರಿಸಿವೆ. ಸೈನ್ಯವು ಸನ್ನದ್ಧ ಸ್ಥಿತಿಯಲ್ಲಿರುವುದರಿಂದ, ಈ ಕಾರ್ಯಾಚರಣೆ ಇಂದಿಗೂ ಸಕ್ರಿಯವೆಂದೇ ಪರಿಗಣಿಸಲ್ಪಟ್ಟಿದೆ. ಹೀಗಾಗಿ, ನಾಳೆಯ ಒಳಗೆ ಟ್ರಂಪ್ ಕಾಂಗ್ರೆಸ್‌ನಿಂದ ಅನುಮೋದನೆ ಪಡೆಯದಿದ್ದರೆ ಅಥವಾ 30 ದಿನಗಳ ಕಾಲ ವಿಸ್ತರಣೆ ಕೋರಿ ಮನವಿ ಸಲ್ಲಿಸದಿದ್ದರೆ, ಈ ಕಾರ್ಯಾಚರಣೆಯು ಕಾನೂನುಬಾಹಿರ ಎನಿಸಿಕೊಳ್ಳುವ ಸಾಧ್ಯತೆಯಿದೆ.



