ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ಯಾಷನ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ವೇದಿಕೆಯಾದ 79ನೇ ಕಾನ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಫ್ಯಾಷನ್ ಅಬ್ಬರ ಮುಂದುವರಿದಿದೆ. ಈಗಾಗಲೇ ತಮ್ಮ ವಿಭಿನ್ನ ಉಡುಪುಗಳ ಮೂಲಕ ಗಮನ ಸೆಳೆದಿರುವ ಆಲಿಯಾ, ಇದೀಗ ತಮ್ಮ ಎರಡನೇ ರೆಡ್ ಕಾರ್ಪೆಟ್ ಪ್ರವೇಶಕ್ಕಾಗಿ ದೇವಕನ್ಯೆ ‘ಸಿಂಡರೆಲ್ಲಾ’ ಅವತಾರವನ್ನು ಆಯ್ದುಕೊಂಡಿದ್ದಾರೆ.
ಪ್ರಸಿದ್ಧ ಅಂತಾರಾಷ್ಟ್ರೀಯ ಡಿಸೈನರ್ ಡ್ಯಾನಿಯಲ್ ಫ್ರಾಂಕೆಲ್ ಸಿದ್ಧಪಡಿಸಿದ ತಿಳಿ ನೀಲಿ ಬಣ್ಣದ ಲೇಸ್ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಆಲಿಯಾ ಹೆಜ್ಜೆ ಹಾಕುತ್ತಿದ್ದಂತೆ ಫ್ಯಾಷನ್ ವಿಮರ್ಶಕರು ಮತ್ತು ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ತಿಳಿ ನೀಲಿ ಬಣ್ಣದ ಈ ಸುಂದರ ಗೌನ್ ಅನ್ನು ಸಿಲ್ಕ್ ಸ್ಯಾಟಿನ್ ಮತ್ತು ಅತ್ಯಂತ ಸೂಕ್ಷ್ಮವಾದ ಹನಿಕೊಂಬ್ ಲೇಸ್ ಮಿಶ್ರಣದಿಂದ ಸಿದ್ಧಪಡಿಸಲಾಗಿದೆ. ಇದು ಬಿಗಿಯಾದ ಕಾರ್ಸೆಟ್ ಮಾದರಿಯ ಬಾಡೀಸ್ ಹೊಂದಿದ್ದು, ಕೆಳಭಾಗದಲ್ಲಿ ನೆಲ ಮುಟ್ಟುವಂತಹ ದೊಡ್ಡದಾದ ಲೇಯರ್ಡ್ ಸ್ಕರ್ಟ್ ವಿನ್ಯಾಸವನ್ನು ಹೊಂದಿದೆ. ಹಳೆಯ ಕಾಲದ ರಾಜಮನೆತನದ ವೈಭವವನ್ನು ನೆನಪಿಸುವಂತೆ ಕುತ್ತಿಗೆಗೆ ಹೊಂದಿಕೊಳ್ಳುವ ಲೇಸ್ ಕಾಲರ್ ಚೋಕರ್ ಈ ಗೌನ್‌ನ ಪ್ರಮುಖ ಆಕರ್ಷಣೆಯಾಗಿದೆ.
ಪ್ರಸಿದ್ಧ ಸ್ಟೈಲಿಸ್ಟ್ ರಿಯಾ ಕಪೂರ್ ಈ ಲುಕ್ ಅನ್ನು ವಿನ್ಯಾಸಗೊಳಿಸಿದ್ದು, ಆಭರಣಗಳ ಪ್ರಮಾಣಕ್ಕಿಂತ ಅದರ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಲೇಸ್ ಚೋಕರ್‌ನ ಮಧ್ಯಭಾಗದಲ್ಲಿ ಕಣ್ಣು ಸೆಳೆಯುವ ಕಣ್ಣೀರಿನ ಹನಿಯ ಆಕಾರದ ವಜ್ರದ ಪೆಂಡೆಂಟ್, ಸಣ್ಣ ವಜ್ರದ ಓಲೆಗಳು ಮತ್ತು ಕೈಬೆರಳುಗಳಲ್ಲಿ ಹೊಳೆಯುವ ವಜ್ರದ ಉಂಗುರಗಳನ್ನು ಧರಿಸಿದ್ದರು.



