June 7, 2026
Sunday, June 7, 2026
spot_img

ಮಾದಕ ಮುಕ್ತ ಭಾರತಕ್ಕೆ ಅಮಿತ್ ಶಾ ಪಣ: ಮಧ್ಯಪ್ರಾಚ್ಯಕ್ಕೆ ಸಾಗಿಸುತ್ತಿದ್ದ ಮಾದಕ ದ್ರವ್ಯ ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಮಾದಕ ವಸ್ತುಗಳ ಸಾಗಾಟ ಜಾಲದ ವಿರುದ್ಧ ಕೇಂದ್ರ ಸರ್ಕಾರ ಭಾರಿ ಕಾರ್ಯಾಚರಣೆ ನಡೆಸಿದೆ. ಮಾದಕವಸ್ತು ನಿಯಂತ್ರಣ ಬ್ಯೂರೋ ಹಮ್ಮಿಕೊಂಡಿದ್ದ ‘ಆಪರೇಷನ್ ರೇಜ್‌ಪಿಲ್’ ಅಡಿಯಲ್ಲಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರಿ ಪ್ರಮಾಣದ ‘ಕ್ಯಾಪ್ಟಗನ್’ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಅಂತಾರಾಷ್ಟ್ರೀಯ ಮಾರುಕಟ್ಟೆಯ ಈ ಡ್ರಗ್ಸ್ ಒಟ್ಟು ಮೌಲ್ಯ ಅಂದಾಜು ₹182 ಕೋಟಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಪ್ರಕಟಿಸಿದ್ದಾರೆ.

ಗುಜರಾತ್‌ನ ಮುದ್ರಾ ಬಂದರು ಮತ್ತು ದೆಹಲಿಯ ನೆಬ್ ಸರಾಯ್ ಪ್ರದೇಶದಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು, ಸುಮಾರು 227.7 ಕೆಜಿ ತೂಕದ ಕ್ಯಾಪ್ಟಗನ್ ಮಾತ್ರೆ ಹಾಗೂ ಪೌಡರ್ ಅನ್ನು ಜಪ್ತಿ ಮಾಡಿದ್ದಾರೆ. ಈ ನಿಷೇಧಿತ ಸಾಗಾಟದ ಹಿಂದೆ ಇದ್ದ ಸಿರಿಯಾ ಮೂಲದ ವಿದೇಶಿ ಪ್ರಜೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯು ಚಹಾ ಎಲೆಗಳ ಪೆಟ್ಟಿಗೆಯಲ್ಲಿ ಹಾಗೂ ಉಣ್ಣೆಯ ಕಂಟೈನರ್‌ಗಳ ನಡುವೆ ಅತ್ಯಂತ ಚಾಣಾಕ್ಷತನದಿಂದ ಈ ಮಾದಕ ವಸ್ತುವನ್ನು ಬಚ್ಚಿಟ್ಟಿದ್ದನು. ಪ್ರಾಥಮಿಕ ತನಿಖೆಯ ಪ್ರಕಾರ, ಸಿರಿಯಾದಿಂದ ಬಂದಿದ್ದ ಈ ಡ್ರಗ್ಸ್ ಅನ್ನು ಭಾರತದ ಮೂಲಕ ಮಧ್ಯಪ್ರಾಚ್ಯ ಹಾಗೂ ಪಶ್ಚಿಮ ಏಷ್ಯಾದ ದೇಶಗಳಿಗೆ ರಫ್ತು ಮಾಡಲು ಸಂಚು ರೂಪಿಸಲಾಗಿತ್ತು.

ಕ್ಯಾಪ್ಟಗನ್ ಎಂಬುದು ಅತ್ಯಂತ ತೀವ್ರವಾಗಿ ವ್ಯಸನ ಮೂಡಿಸುವ ಒಂದು ಸಿಂಥೆಟಿಕ್ ಆಂಫೆಟಮೈನ್ ಮಾದರಿಯ ಉತ್ತೇಜಕವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ‘ಜಿಹಾದಿ ಡ್ರಗ್’ ಮತ್ತು ‘ಬಡವರ ಕೊಕೇನ್’ ಎಂದೂ ಕರೆಯಲಾಗುತ್ತದೆ. ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಐಸಿಸ್ ನಂತಹ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರು ದಾಳಿ ನಡೆಸುವಾಗ ತಮ್ಮಲ್ಲಿನ ಭೀತಿಯನ್ನು ಹೋಗಲಾಡಿಸಿಕೊಳ್ಳಲು, ಹಸಿವು ಮರೆಯಲು ಮತ್ತು ದೈಹಿಕ ಶಕ್ತಿಯನ್ನು ಅತಿಯಾಗಿ ಹೆಚ್ಚಿಸಿಕೊಳ್ಳಲು ಈ ಅಪಾಯಕಾರಿ ಕೆಮಿಕಲ್ ಡ್ರಗ್ ಬಳಸುತ್ತಾರೆ ಎನ್ನಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಮಾದಕವಸ್ತು ಮುಕ್ತ ಭಾರತ’ ನಿರ್ಮಾಣಕ್ಕೆ ಬದ್ಧವಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಭಾರತಕ್ಕೆ ಕಾನೂನುಬಾಹಿರವಾಗಿ ಪ್ರವೇಶಿಸುವ ಅಥವಾ ದೇಶದ ಭೂಪ್ರದೇಶವನ್ನು ಸಾರಿಗೆ ಮಾರ್ಗವಾಗಿ ಬಳಸಿಕೊಳ್ಳಲು ಯತ್ನಿಸುವ ಪ್ರತಿ ಗ್ರಾಂ ಡ್ರಗ್ಸ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಅಂತಾರಾಷ್ಟ್ರೀಯ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೆಸೆದ ಎನ್‌ಸಿಬಿ ಅಧಿಕಾರಿಗಳ ಸಾಹಸವನ್ನು ಗೃಹ ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !