ಹೊಸದಿಗಂತ ಡಿಜಿಟಲ್ ಡೆಸ್ಕ್:
ಆತ್ಮಸಾಕ್ಷಾತ್ಕಾರ ಹಾಗೂ ಮೋಕ್ಷ ಸಾಧನೆಗೆ ಶರೀರ ಅಗತ್ಯವಾಗಿದ್ದು, ಶರೀರವನ್ನು ಉಳಿಸಿಕೊಳ್ಳಲು ಆಹಾರ ಅನಿವಾರ್ಯ. ಹೀಗಾಗಿ ಮನುಷ್ಯನ ಜ್ಞಾನ, ಭಕ್ತಿ ಹಾಗೂ ಮುಕ್ತಿಯ ಸಾಧನೆಗೆ ಅನ್ನವೇ ಪ್ರಮುಖ ಆಧಾರವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಮಂಗಳವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ಅನುಗ್ರಹಿಸಿದರು.

ಶಿವ ಪಾರ್ವತಿಯರ ಮಧ್ಯೆ ವಾದ ನಡೆದ ಸಂಧರ್ಭವನ್ನು ಉದಾಹರಿಸಿ, ಶಿವನು ಭೌತಿಕ ಜಗತ್ತು ಮಿಥ್ಯೆ, ಶರೀರ ಮಾಯೆ, ಆಹಾರ ಸುಳ್ಳು, ಶುದ್ಧ ಚೈತನ್ಯ ಮಾತ್ರ ಸತ್ಯ ಎಂಬುದಾಗಿ ಹೇಳಿದ, ಆದರಿಂದ ಕುಪಿತಳಾದ ಪಾರ್ವತಿಯು, ಕಾಶಿಯಲ್ಲಿ ಅನ್ನಪೂರ್ಣೇಶ್ವರಿಯಾಗಿ ಅವತರಿಸಿದಳು. ಆನಂತರ ಶಿವನು ಭಿಕ್ಷುಕನ ರೂಪದಲ್ಲಿ ‘ಭವತಿ ಭಿಕ್ಷಾಂ ದೇಹಿ’ ಎಂದು ಕೇಳಿದ ಎಂಬ ಕಥೆಯನ್ನು ಉಲ್ಲೇಖಿಸಿ, ಇದು ಅನ್ನದ ಮಹತ್ವವನ್ನು ಲೋಕಕ್ಕೆ ಸಾರಲು ಆದಿದಂಪತಿಗಳು ಆಡಿದ ನಾಟಕ ಎಂದು ಶ್ರೀಗಳು ವಿವರಿಸಿದರು.

ಅನ್ನಪೂರ್ಣೇಶ್ವರಿ ಜ್ಞಾನ, ಭಕ್ತಿ ಮತ್ತು ಮುಕ್ತಿಯ ಅನುಗ್ರಹವನ್ನು ನೀಡುವ ದೇವತೆಯಾಗಿದ್ದಾಳೆ. ಶಂಕರಾಚಾರ್ಯರ ಅನ್ನಪೂರ್ಣೇಶ್ವರಿ ಸ್ತೋತ್ರದಲ್ಲಿಯೂ ಅನ್ನದ ಮಹತ್ವ ಹಾಗೂ ಜ್ಞಾನ-ಭಕ್ತಿ-ಮುಕ್ತಿಯೊಂದಿಗೆ ಅದರ ಸಂಬಂಧವನ್ನು ಕಾಣಬಹುದು ಎಂದು ಶ್ರೀಗಳು ತಿಳಿಸಿದರು.
ರಾಣಾಯನೀಯ ಶಾಖೆಯ ಸಾಮವೇದ ಪಾರಾಯಣ

ಚಾತುರ್ಮಾಸ್ಯದ ಅಂಗವಾಗಿ ಸೆ.1ರಿಂದ 5ರವರೆಗೆ ಸಾಮವೇದದ ರಾಣಾಯನೀಯ ಶಾಖೆಯ ಪಾರಾಯಣ ನಡೆಯಲಿದೆ. ವೇ.ಮೂ. ಸುಬ್ರಹ್ಮಣ್ಯ ಭಟ್ಟ ಉಂಚಗೇರಿ ಅವರ ನೇತೃತ್ವದಲ್ಲಿ ವೇದ ವಿದ್ವಾಂಸರು ಪಾರಾಯಣ ಆರಂಭಿಸಿದ್ದಾರೆ. ಸಾವಿರ ಶಾಖೆಗಳನ್ನು ಹೊಂದಿದ್ದ ಸಾಮವೇದದಲ್ಲಿ ಇಂದು ಬೆರಳೆಣಿಕೆಯ ಶಾಖೆಗಳು ಮಾತ್ರ ಉಳಿದಿದ್ದು, ರಾಣಾಯನೀಯ ಶಾಖೆಯು ಶ್ರೀಮಠದ ವ್ಯಾಪ್ತಿಯ ಹೊನ್ನಾವರದ ಭಾಗದಲ್ಲಿ ಮಾತ್ರ ಉಳಿದುಕೊಂಡಿದೆ. ರಾಣಾಯನೀಯ ಶಾಖೆಯ ಸಂರಕ್ಷಣೆಗಾಗಿ ಶ್ರೀಮಠದ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಗಳು ನಡೆದಿದ್ದು, ಶ್ರೀಮಠವು ಸಾಮವೇದ ಶಾಖೆಯ ಉಳಿವಿಗಾಗಿ ರಾಷ್ಟ್ರೀಯ ಸಮ್ಮೇಳನವನ್ನೂ ಸಂಘಟಿಸಿತ್ತು. ಕೆಲವಾರು ತಿಂಗಳುಗಳ ಹಿಂದೆ ರಾಣಾಯನೀಯ ಸಭಾದವರು ಪ್ರಕಾಶಿಸಿದ ‘ಸಾಮವೇದ ರಾಣಾಯನೀಯಮ್ ವೇಯಗಾನಮ್’ ಗ್ರಂಥವನ್ನು ಶ್ರೀಗಳು ಲೋಕಾರ್ಪಣೆ ಮಾಡಿ ಆಶೀರ್ವದಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಜ್ಯೋತಿಷಿ ಪಾಲಕ್ಕಾಡು ವೆಂಕಟೇಶ ಭಟ್, ಶ್ರೀ ಶಕಟಪುರಮಠದ ವ್ಯವಸ್ಥಾಪಕ ರಾಘವ, ನಿವೃತ್ತ ಆದಾಯ ತೆರಿಗೆ ಆಯುಕ್ತ ಗಿರೀಶ ಕೊಣಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀಗಳಿಂದ ಆಶೀರ್ವಾದ ಪಡೆದರು.
ಗಣಪತಿ ವೆಂಕಟರಮಣ ಹೆಗಡೆ ಕಾನಮೂಲೆ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸವಿತಾ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಈಶ್ವರ ಕೊಡಿಯಾ ದಂಪತಿ ಪಾದುಕಾಪೂಜೆಯನ್ನು ನೆರವೇರಿಸಿದರು. ದಿನಪ್ರಧಾನರಾಗಿ ಎಮ್.ಎನ್.ಹರೀಶ ದಂಪತಿ ಉಪಸ್ಥಿತರಿದ್ದರು.




