ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಧ್ಯಾತ್ಮಿಕ ಸಾಧನೆಗೆ ಆರೋಗ್ಯಕರ ಹಾಗೂ ಶಕ್ತಿಯುತ ಶರೀರದ ಜೊತೆಗೆ ದೀರ್ಘಾಯಸ್ಸು ಅತ್ಯಗತ್ಯ. ದೇಹಕ್ಕೆ ಸ್ಥಿರತೆ, ಮನಸ್ಸಿಗೆ ಏಕಾಗ್ರತೆ ಹಾಗೂ ಸಾಧನೆಗೆ ಬೇಕಾದ ಶಕ್ತಿಯನ್ನು ನೀಡುವ ಸಾಮರ್ಥ್ಯ ತುಪ್ಪಕ್ಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಶುಕ್ರವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.
ವೇದದಲ್ಲಿ ತುಪ್ಪವನ್ನು ‘ದೇವರ ನಾಲಿಗೆ’ ಎಂದು ಉಲ್ಲೇಖಿಸಲಾಗಿದೆ. ಹೋಮ-ಹವನಗಳಲ್ಲಿ ಯಾವುದೇ ದ್ರವ್ಯವನ್ನು ದೇವರಿಗೆ ಸಮರ್ಪಿಸಿದರೂ ಅದನ್ನು ತುಪ್ಪದ ಮೂಲಕವೇ ಅರ್ಪಿಸಲಾಗುತ್ತದೆ. ಹೀಗಾಗಿ ದೇವರು ದ್ರವ್ಯಗಳನ್ನು ಸ್ವೀಕರಿಸುವ ಮಾಧ್ಯಮವಾಗಿ ತುಪ್ಪಕ್ಕೆ ವಿಶೇಷ ಸ್ಥಾನವಿದೆ ಎಂದು ವಿವರಿಸಿದರು.
ಸಾಧಕನಿಗೆ ತುಪ್ಪ ಹೇಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬುದನ್ನು ವಿವರಿಸಿದ ಅವರು, ಸಾಧನೆ ಎಂದರೆ ದೇವಪ್ರೀತಿ ಸಂಪಾದಿಸುವುದು. ಜೀವ ಮತ್ತು ದೇವರ ನಡುವೆ ಗೋಡೆಯಾಗಿ ನಿಲ್ಲುವ ಕರ್ಮಫಲವೇ ಪಾಪ. ಆ ಪಾಪವನ್ನು ಕರಗಿಸಿ, ಸಾಧಕನಿಗೆ ಭಗವಂತನೊಂದಿಗೆ ಸಂಪರ್ಕ ಕಲ್ಪಿಸುವ ಶಕ್ತಿ ತುಪ್ಪಕ್ಕಿದೆ ಎಂಬ ನಂಬಿಕೆಯಿದೆ ಎಂದು ಹೇಳಿದರು. ತುಪ್ಪವು ಮಂಗಳದ್ರವ್ಯವಾಗಿದ್ದು, ಅದರ ದರ್ಶನ, ಸ್ಪರ್ಶ ಹಾಗೂ ಸೇವನೆಯಿಂದ ಪಾಪಕ್ಷಯವಾಗುತ್ತದೆ. ದುಷ್ಟಶಕ್ತಿಗಳಿಂದ ಸಾಧಕನನ್ನು ರಕ್ಷಿಸುವ ರಕ್ಷಾಕವಚದಂತೆಯೂ ತುಪ್ಪ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.

ಮೃತ್ಯು, ಮುಪ್ಪು ಹಾಗೂ ರೋಗಗಳ ವಿರುದ್ಧ ದೇಹಕ್ಕೆ ಶಕ್ತಿ ನೀಡುವ ಪದಾರ್ಥಗಳನ್ನು ಆಯುರ್ವೇದದಲ್ಲಿ ‘ರಸಾಯನ’ ಎಂದು ಕರೆಯಲಾಗುತ್ತದೆ. ತುಪ್ಪ ಉತ್ತಮ ರಸಾಯನವಾಗಿದ್ದು, ದೇಹಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಶ್ರೀಗಳು ಹೇಳಿದರು. ದೇಹ ಸದೃಢವಾಗಿದ್ದಾಗಲೇ ಸಾಧನೆಯತ್ತ ಗಮನಹರಿಸಬೇಕು. ವೃದ್ಧಾಪ್ಯದಲ್ಲಿ ಮಾತ್ರ ಆಧ್ಯಾತ್ಮಿಕ ಸಾಧನೆ ಆರಂಭಿಸುವ ಬದಲು ಭಾರತೀಯ ಪರಂಪರೆಯಂತೆ ಬ್ರಹ್ಮಚರ್ಯದಲ್ಲೇ ಸಾಧನೆಗೆ ಪ್ರವೇಶಿಸುವುದು ಸೂಕ್ತ ಎಂದರು.
ಇಂದು ಅರವತ್ತು ವರ್ಷವಾದ ನಂತರ ಭಗವದ್ಗೀತೆಯ ಪುಸ್ತಕವನ್ನು ಹಿಡಿಯುವ ಜನರನ್ನು ಕಾಣುತ್ತೇವೆ. ಶರೀರ ದುರ್ಬಲವಾಗಿರುವುದರಿಂದ ಮುಪ್ಪಿನಲ್ಲಿ ಸಾಧನೆ ಆರಂಭಿಸುವುದಲ್ಲ.ಆದರೆ ಭಾರತೀಯ ಪರಂಪರೆಯಲ್ಲಿ ಬ್ರಹ್ಮಚರ್ಯದಲ್ಲೇ ಸಾಧನೆಯು ಆರಂಭವಾಗುತ್ತದೆ. ಸಾಧನೆಗೆ ಸ್ವಸ್ಥ ಶರೀರ ಬೇಕಾಗಿದ್ದು, ದೇಹ ಗಟ್ಟಿಯಿದ್ದಾಗಲೇ ಸಾಧನೆಯನ್ನು ಮಾಡಬೇಕು. ತುಪ್ಪ ಸಾಧನೆಗೆ ಬೇಕಾದ ಬಲವನ್ನು, ವಯಸ್ಥಾಪನ ಶಕ್ತಿಯನ್ನು ನೀಡುತ್ತದೆ ಎಂದರು.

ದೀರ್ಘಾಯಸ್ಸು ಏಕೆ ಬೇಕು?
ಸಾಧನೆ ಮಾಡಲು ಮಾತ್ರವಲ್ಲ, ಸಾಧನೆಯ ಮೂಲಕ ದೊರೆಯುವ ಒಳಿತನ್ನು ಸಮಾಜ ಹಾಗೂ ಜಗತ್ತಿಗೆ ಹಂಚಲು ಕೂಡ ದೀರ್ಘಾಯಸ್ಸು ಅಗತ್ಯ. ಶಕ್ತಿಯುತ ಶರೀರ ಮತ್ತು ದೀರ್ಘ ಜೀವನವನ್ನು ಸಾರ್ಥಕವಾಗಿ ಬಳಸಿಕೊಂಡು ಇದೇ ಜನ್ಮದಲ್ಲಿ ಸಾಧನೆಯ ಮೂಲಕ ಮೋಕ್ಷದ ಗುರಿ ಸಾಧಿಸಿಕೊಳ್ಳಬೇಕು ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ಭಾರತ ಮಂಡಲದ ಮುಂಬಯಿ, ಡೊಂಬಿವಿಲಿ ಹಾಗೂ ಹೈದರಾಬದ್ ಹವ್ಯಕ ವಲಯಗಳ ಪರವಾಗಿ ಮುಂಬೈನ ಯು.ಟಿ. ಕೃಷ್ಣಮೂರ್ತಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಉದ್ಯಮಿಗಳಾದ ಗೋಪಾಲಕೃಷ್ಣ ಭಟ್, ಪ್ರಭಾಕರ ಎಂ.ಎನ್, ಡಾ. ರವಿರಾಜ್ ಕಡ್ಲೆ, ದಿನಪ್ರಧಾನರಾಗಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ದಂಪತಿ ಉಪಸ್ಥಿತರಿದ್ದರು.



