May 8, 2026
Friday, May 8, 2026
spot_img

ಮನುಕುಲಕ್ಕೆ ತಟ್ಟಿದೆ ಮತ್ತೊಂದು ಶಾಪ?: ‘ಹ್ಯಾಂಟಾ’ ದಿಂದ ನಮ್ಮನ್ನು ಕಾಪಾಡೋರ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತು ಕೋವಿಡ್ ಸಂಕಷ್ಟದಿಂದ ನಿಧಾನವಾಗಿ ಹೊರಬರುತ್ತಿರುವ ಹೊತ್ತಲ್ಲೇ ಹ್ಯಾಂಟಾವೈರಸ್ ಸೋಂಕಿನ ಪ್ರಕರಣಗಳು ಹೊಸ ಚರ್ಚೆಗೆ ಕಾರಣವಾಗಿವೆ.

ಡಚ್ ಸಂಶೋಧನಾ ಹಡಗಿನಲ್ಲಿ ಕಾಣಿಸಿಕೊಂಡ ಈ ವೈರಸ್ ಸೋಂಕು ಆತಂಕ ಹುಟ್ಟಿಸಿದರೂ, ಇದು ಕೋವಿಡ್ ಮಾದರಿಯ ಜಾಗತಿಕ ಸಾಂಕ್ರಾಮಿಕವಾಗಿ ರೂಪುಗೊಳ್ಳುವ ಸಾಧ್ಯತೆ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಹಡಗಿನಲ್ಲಿ ವರದಿಯಾದ ಸೋಂಕಿನ ಪ್ರಕರಣಗಳಲ್ಲಿ ಕೆಲವರು ಮೃತಪಟ್ಟಿದ್ದು, ಇನ್ನೂ ಕೆಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿಗೆ ಕಾರಣವಾದದ್ದು ಆಂಡಿಸ್ ತಳಿಯ ಹ್ಯಾಂಟಾವೈರಸ್ ಎಂದು ದೃಢಪಟ್ಟಿದ್ದು, ಇದು ಅಪರೂಪವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಗುಣ ಹೊಂದಿದೆ. ಆದರೂ ಇದರ ಹರಡುವಿಕೆ ಕೋವಿಡ್‌ನಷ್ಟು ವೇಗವಾಗಿ ನಡೆಯುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ:

ಹ್ಯಾಂಟಾವೈರಸ್ ಸಾಮಾನ್ಯವಾಗಿ ಇಲಿ ಸೇರಿದಂತೆ ದಂಶಕ ಪ್ರಾಣಿಗಳ ಮೂತ್ರ, ಹಿಕ್ಕೆ ಅಥವಾ ಲಾಲಾರಸದ ಸಂಪರ್ಕದಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ದೀರ್ಘಕಾಲದ ನಿಕಟ ಸಂಪರ್ಕವಿದ್ದರೆ ಮಾತ್ರ ಮತ್ತೊಬ್ಬರಿಗೆ ತಗುಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಾಮಾನ್ಯ ಜನರಲ್ಲಿ ಆತಂಕಕ್ಕಿಂತ ಎಚ್ಚರಿಕೆ ಮುಖ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಅಥವಾ ಕಡ್ಡಾಯ ಮಾಸ್ಕ್‌ನಂತಹ ಕಠಿಣ ನಿಯಮಗಳ ಅಗತ್ಯವಿಲ್ಲ. ಸ್ವಚ್ಛತೆ ಕಾಪಾಡುವುದು, ದೂರ ಇರುವುದು ಹಾಗೂ ಜ್ವರ, ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸುರಕ್ಷಿತ ಕ್ರಮ ಎಂದು WHO ತಿಳಿಸಿದೆ. ಜಾಗತಿಕ ಆರೋಗ್ಯದ ಅಪಾಯ ಈಗಾಗಲೇ ಕಡಿಮೆ ಮಟ್ಟದಲ್ಲಿದೆ ಎನ್ನುವುದು ಸದ್ಯದ ಸಮಾಧಾನದ ಸುದ್ದಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !