October 14, 2026
Wednesday, October 14, 2026
spot_img

ಇಂದಿನಿಂದ ವಿಧಾನಮಂಡಲ ವಿಶೇಷ ಅಧಿವೇಶನ: ಯಾವೆಲ್ಲಾ ವಿಷಯದ ಬಗ್ಗೆ ಚರ್ಚೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದಿನಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ. ಈ ಬಾರಿ ಕಸ್ತೂರಿ ರಂಗನ್‌ ವರದಿ, ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ವಂದೇ ಮಾತರಂನ್ನು ಸಂಪೂರ್ಣ ಹಾಡಬೇಕು ಅನ್ನೋ ಬಗ್ಗೆ ಕೂಡ ಬಿಸಿಬಿಸಿ ಚರ್ಚೆ ಸಾಧ್ಯತೆ ಇದೆ.

ಕಾರ್ಯಕ್ರಮವೊಂದರಲ್ಲಿ ವಂದೇ ಮಾತರಂ ಹಾಡನ್ನು ಸಂಪೂರ್ಣ ಹಾಡಬೇಕು ಎಂದು ಶಾಸಕ ಚನ್ನಬಸಪ್ಪ ಒತ್ತಾಯಿಸಿದ್ದರು. ಆ ವೇಳೆ ಆರ್‌. ಅಶೋಕ್‌ ಅವರು ಸದನದಲ್ಲೇ ಸಂಪೂರ್ಣ ಹಾಡುತ್ತೇವೆ ಎಂದು ಚಾಲೆಂಜ್‌ ಮಾಡಿದ್ದರು. ಹೀಗಾಗಿ ಸಂಪೂರ್ಣ ಹಾಡಿ ತೋರಿಸುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರದ ಆದೇಶದಂತೆ ವಿಧಾನಸಭೆಯಲ್ಲಿ ಎರಡು ಸಾಲು ಮೊಳಗಲಿದೆ, ಆದರೆ ಬಿಜೆಪಿ ಶಾಸಕರು ಸಂಪೂರ್ಣ ಹಾಡನ್ನು ಹಾಡಲಿದ್ದಾರೆ.

ಬರ ಪರಿಸ್ಥಿತಿ ಮತ್ತು ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆಯಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಜನರ ಮೇಲಾಗುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆ ನಡೆಸಲು ಸರ್ಕಾರ ಮೂರು ದಿನಗಳ ವಿಶೇಷ ಅಧಿವೇಶನ ನಡೆಸುತ್ತಿದೆ. ಬೆಳಗ್ಗೆ 11 ಗಂಟೆಗೆ ಸದನ ಆರಂಭವಾಗಲಿದ್ದು, ಹಲವು ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವೆ.

ಕಳೆದ ತಿಂಗಳು 11 ದಿನಗಳ ಮುಂಗಾರು ಅಧಿವೇಶನ ಗದ್ದಲದಲ್ಲೇ ಮುಗಿದಿತ್ತು. ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದು ಪ್ರತಿದಿನ ಧರಣಿ, ಪ್ರತಿಭಟನೆ ನಡೆಸಿದ್ದರಿಂದ ಕಲಾಪಕ್ಕೆ ಅಡ್ಡಿಯಾಗಿತ್ತು. ಬರ ಸೇರಿದಂತೆ ಯಾವುದೇ ಸಮಸ್ಯೆಗಳ ಬಗ್ಗೆ ಚರ್ಚೆಯಾಗದೆ ಮೂರು ದಿನ ಮೊದಲೇ ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು.

ಯಾವೆಲ್ಲಾ ವಿಷಯಗಳ ಬಗ್ಗೆ ಚರ್ಚೆ?

ಪಶ್ಚಿಮಘಟ್ಟದ ಕುರಿತಾದ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ವಿರುದ್ಧ ಚರ್ಚೆ ನಡೆಲಿದೆ. ಇದರ ಜತೆಗೆ ರಾಜ್ಯದಲ್ಲಿ ಬರ, ಬರದಿಂದ ನೀರಿನ ಕೊರತೆ, ಬರದಿಂದ ವಿದ್ಯುತ್‌ ಕೊರತೆ, ಬಿಡದಿ ಟೌನ್‌ಶಿಪ್‌, ಟೋಲ್‌, ಕೆಪಿಎಸ್‌ಸಿ ಹಗರಣಗಳ ವಿಚಾರ ಮುನ್ನೆಲೆಗೆ ಬರಲಿದೆ.

Must Read