May 20, 2026
Wednesday, May 20, 2026
spot_img

ಬೆಂಗಳೂರಿನಲ್ಲಿ ರೋಡ್ ರೇಜ್ ಹವಾ: ಬಿಎಂಟಿಸಿ ಬಸ್ ಚಾಲಕನ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ್ದ ಮೆಕ್ಯಾನಿಕ್ ಅರೆಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ಬಳಿ ಮೇ 12 ರಂದು ನಡೆದ ರೋಡ್ ರೇಜ್ ಘಟನೆಯಲ್ಲಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮೂವರು ಆರೋಪಿಗಳ ಪೈಕಿ ಒಬ್ಬನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಆಯುಧಗಳನ್ನು ಹಿಡಿದು ಆಕ್ರಮಣಕಾರಿಯಾಗಿ ಕಿರುಚಾಡುತ್ತಾ ಗಲಾಟೆಯ ಸಂದರ್ಭದಲ್ಲಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಂಧಿತ ಆರೋಪಿಯನ್ನು ಮೆಕ್ಯಾನಿಕ್ ಕೆಲಸ ಮಾಡುವ ಅಬ್ದುಲ್ ಶೋಯೆಬ್ (26) ಎಂದು ಗುರುತಿಸಲಾಗಿದ್ದು, ಬನಶಂಕರಿಯಿಂದ ಬನ್ನೇರುಘಟ್ಟಕ್ಕೆ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಅನ್ನು ಗೊಟ್ಟಿಗೆರೆ ಬಳಿ ಸ್ಕೂಟರ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಓವರ್‌ಟೇಕ್ ಮಾಡುವ ವಿಚಾರವಾಗಿ ತಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಬಸ್ ಚಾಲಕ ಮತ್ತು ಮೂವರು ಯುವಕರ ನಡುವೆ ವಾಗ್ವಾದ ನಡೆದಿದೆ. ಮೂವರು ಆರೋಪಿಗಳು ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ರಾಡ್ ಹಾಗೂ ಇತರ ಉಪಕರಣಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಇದರ ಬೆನ್ನಲ್ಲೇ ಹುಳಿಮಾವು ಪೊಲೀಸರು ಕೊಲೆ ಯತ್ನ ಆರೋಪದಡಿ ಸುಯೋಮೋಟೋ ಕೇಸ್‌ ದಾಖಲಿಸಿಕೊಂಡಿದ್ದರು.

ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ಮೇ 17 ರಂದು ಬಿಲ್ವಾರದಹಳ್ಳಿಯ ಟಿಪ್ಪು ಸರ್ಕಲ್ ಬಳಿ ಅಬ್ದುಲ್‌ನನ್ನು ಬಂಧಿಸಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !