October 11, 2026
Sunday, October 11, 2026
spot_img

ರೈಲ್ವೆ ಪ್ರಯಾಣಿಕರಿಗೆ ಬಿಗ್ ಶಾಕ್: ಜುಲೈ 1ರಿಂದ ಈ ತಪ್ಪು ಮಾಡಿದರೆ ತೆರಬೇಕು ಭಾರೀ ದಂಡ, ಜೈಲು ಶಿಕ್ಷೆಯೂ ಫಿಕ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:


ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ, ಮಹಿಳಾ ಕೋಚ್‌ಗೆ ಅನಧಿಕೃತ ಪ್ರವೇಶ, ನಿಯಮ ಉಲ್ಲಂಘಿಸುವ ಪ್ರಯಾಣಿಕರಿಗೆ ಭರ್ಜರಿ ಬಿಸಿ ಮುಟ್ಟಿಸಲು ರೈಲ್ವೆ ಇಲಾಖೆ ಮುಂದಾಗಿದೆ.


ಈ ಪ್ರಕರಣಗಳ ದಂಡದ ಮೊತ್ತವನ್ನು ಹೆಚ್ಚಿಸಲು ಇಲಾಖೆ ಮುಂದಾಗಿದ್ದು, ಹೊಸ ನಿಯಮಗಳು ಜುಲೈ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಸುಮಾರು 13 ವರ್ಷಗಳ ಬಳಿಕ ರೈಲ್ವೆ ತನ್ನ ದಂಡದ ಮೊತ್ತ ಪರಿಷ್ಕರಣೆ ಮಾಡಲಾಗುತ್ತಿದೆ. ಇದುವರೆಗೆ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಟಿಕೆಟ್ ದರದ ಜೊತೆಗೆ ರೂ. 250 ದಂಡ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ ಈ ದಂಡವನ್ನು ರೂ. 500ಕ್ಕೆ ಏರಿಸಲು ನಿರ್ಧರಿಸಲಾಗಿದೆ.


ಮಹಿಳಾ ಕೋಚ್‌ಗೆ ಹೋದರೂ ಭಾರೀ ದಂಡ!
ಮಹಿಳಾ ಮೀಸಲು ಬೋಗಿಗೆ ಅನಧಿಕೃತವಾಗಿ ಪ್ರವೇಶಿಸುವ ಪುರುಷ ಪ್ರಯಾಣಿಕರಿಗೆ ಸಾವಿರಾರು ರೂಪಾಯಿ ದಂಡ ವಿಧಿಸುವ ಪ್ರಸ್ತಾವನೆಯೂ ಇದೆ. ಇದಲ್ಲದೆ ರೈಲ್ವೆ ಆವರಣದಲ್ಲಿ ಅಕ್ರಮ ವ್ಯಾಪಾರ, ಭಿಕ್ಷಾಟನೆ ಹಾಗೂ ಇತರ ಉಲ್ಲಂಘನೆಗಳಿಗೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ರೈಲಿನಲ್ಲಿ ಮದ್ಯಪಾನ ಮಾಡಿ ಗಲಾಟೆ ಮಾಡುವುದು, ಸಹ ಪ್ರಯಾಣಿಕರಿಗೆ ಕಿರುಕುಳ ನೀಡುವುದು, ಅಶ್ಲೀಲ ವರ್ತನೆ ತೋರಿಸುವುದು ಮುಂತಾದ ಪ್ರಕರಣಗಳಲ್ಲಿ ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ಎದುರಿಸಬೇಕಾಗಬಹುದು ಎಂದು ರೈಲ್ವೆ ಅಧಿಕಾರಿಗಳು ಎಚ್ಚರಿಸಿದ್ದಾರೆ.


ಏಕೆ ಈ ಕಠಿಣ ನಿರ್ಧಾರ?
ಪ್ರತಿ ವರ್ಷ ಲಕ್ಷಾಂತರ ಮಂದಿ ಟಿಕೆಟ್ ರಹಿತ ಪ್ರಯಾಣಿಕರು ಪತ್ತೆಯಾಗುತ್ತಿರುವುದು ಹಾಗೂ ರೈಲ್ವೆಗೆ ಆಗುತ್ತಿರುವ ಆರ್ಥಿಕ ನಷ್ಟವೇ ಈ ಕಠಿಣ ಕ್ರಮಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಪ್ರಯಾಣಿಕರಲ್ಲಿ ಶಿಸ್ತು ಮೂಡಿಸುವುದು ಮತ್ತು ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಜಾರಿಯಾಗುತ್ತಿದೆ.

Must Read