October 5, 2026
Monday, October 5, 2026
spot_img

ವೆಸ್ಟ್ ಇಂಡೀಸ್ ಸರಣಿ ಮುಕ್ತಾಯ ಬೆನ್ನಲ್ಲೇ ಬಿಗ್ ಅಪ್‌ಡೇಟ್: ಭಾರತ ಪಡೆಯ ‘ಕೋರ್ ಟೀಮ್’ ರೆಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ಅಂತರದಿಂದ ತನ್ನದಾಗಿಸಿಕೊಂಡರೂ, ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಎದುರಾದ 5 ವಿಕೆಟ್‌ಗಳ ಸೋಲು ಭಾರತೀಯ ಕ್ರಿಕೆಟ್ ಮಂಡಳಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಕೆ.ಎಲ್. ರಾಹುಲ್ ಅವರ ಭರ್ಜರಿ ಶತಕ ಹಾಗೂ ರೋಹಿತ್ ಶರ್ಮಾ ಅವರ 92 ರನ್‌ಗಳ ನೆರವಿನಿಂದ ಭಾರತ 351 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆದರೆ, ಪ್ರಮುಖ ಬೌಲರ್‌ಗಳ ಗೈರುಹಾಜರಿಯಿಂದಾಗಿ ಅನುಭವವಿಲ್ಲದ ಬೌಲಿಂಗ್ ಪಡೆ ಈ ಮೊತ್ತವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಸರಣಿಯುದ್ದಕ್ಕೂ ಏಳು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಹಾಗೂ ಡೆತ್ ಓವರ್‌ಗಳಲ್ಲಿ ಬೌಲರ್‌ಗಳು ದುಬಾರಿಯಾಗಿದ್ದು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಅಸಮಾಧಾನ ಮೂಡಿಸಿದೆ.

ಗಿಲ್ ಕ್ಲಿಯರ್ ಸ್ಟೇಟ್ಮೆಂಟ್

2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದ ಕಾರಣ ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಸರಣಿಗೆ ಲಭ್ಯವಿರಲಿಲ್ಲ. ಜೊತೆಗೆ ಹಾರ್ದಿಕ್ ಪಾಂಡ್ಯ ಹಾಗೂ ಪ್ರಸಿದ್ಧ್ ಕೃಷ್ಣ ಗಾಯದಿಂದ ಹೊರಗುಳಿದಿದ್ದರು. ಪಂದ್ಯದ ನಂತರ ಮಾತನಾಡಿದ ನಾಯಕ ಶುಭ್‌ಮನ್ ಗಿಲ್, “ಮುಂದಿನ ಸರಣಿಯಿಂದ ಲಭ್ಯವಿರುವ ಎಲ್ಲಾ ಪ್ರಮುಖ ಆಟಗಾರರು ತಂಡಕ್ಕೆ ಮರಳಲಿದ್ದಾರೆ ಎಂದು ಆಶಿಸುತ್ತೇನೆ. ವಿಶ್ವಕಪ್‌ನಲ್ಲಿ ಯಾವ ಸಂಯೋಜನೆಯೊಂದಿಗೆ ಕಣಕ್ಕಿಳಿಯಲು ಬಯಸುತ್ತೇವೆಯೋ, ಅದೇ ಕಾಂಬಿನೇಷನ್‌ನೊಂದಿಗೆ ಇನ್ಮುಂದೆ ಆಡಲು ನಾವು ಉತ್ಸುಕರಾಗಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ. ಅನ್ಶುಲ್ ಕಂಬೋಜ್ ಮತ್ತು ಆಖಿಬ್ ನಬಿಯಂತಹ ಯುವಕರಿಗೆ ಇದು ಉತ್ತಮ ವೇದಿಕೆಯಾದರೂ, ವಿಶ್ವಕಪ್ ಗೆಲ್ಲಲು ಅನುಭವಿ ಆಟಗಾರರ ಅಗತ್ಯವಿದೆ ಎಂಬುದನ್ನು ಗಿಲ್ ಒಪ್ಪಿಕೊಂಡಿದ್ದಾರೆ.

ಮೈದಾನಕ್ಕಿಳಿಯಲು ‘ಕೋರ್‌ ಟೀಮ್’ ರೆಡಿ

ಬ್ಯಾಟಿಂಗ್ ವಿಭಾಗದಲ್ಲಿ ಹಿರಿಯ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದರೂ, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ತಕ್ಷಣದ ಸುಧಾರಣೆ ಅಗತ್ಯವಿದೆ. ಭಾರತದ ಮುಂದಿನ ಸವಾಲು ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿ. ಈ ಸರಣಿಯ ವೇಳೆಗೆ ಎಲ್ಲಾ ಸ್ಟಾರ್ ಆಟಗಾರರು ತಂಡಕ್ಕೆ ಮರಳಲಿದ್ದು, ವಿಶ್ವಕಪ್‌ನಲ್ಲಿ ಆಡಲಿರುವ ‘ಕೋರ್‌ ಟೀಮ್’ ಮೈದಾನಕ್ಕಿಳಿಯಲಿದೆ.

ವಿಶ್ವಕಪ್ ಕದನಕ್ಕೆ ಕೌಂಟ್‌ಡೌನ್

2027ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಹತ್ತಿರವಾಗುತ್ತಿದ್ದು, ಭಾರತ ತಂಡಕ್ಕೆ ಪ್ರತಿಯೊಂದು ಪಂದ್ಯವೂ ಅತ್ಯಂತ ನಿರ್ಣಾಯಕವಾಗಿದೆ. ಇನ್ಮುಂದೆ ಕೇವಲ ಸರಣಿ ಗೆಲುವಿಗಾಗಿ ಮಾತ್ರವಲ್ಲದೆ, ವಿಶ್ವಕಪ್‌ಗೆ ಬೇಕಾದ ಪರಿಪೂರ್ಣ ಹಾಗೂ ಬಲವಾದ ಸಂಯೋಜನೆಯನ್ನು ಗಟ್ಟಿಗೊಳಿಸಲು ಗಿಲ್ ನೇತೃತ್ವದ ಟೀಮ್ ಇಂಡಿಯಾ ಸಜ್ಜಾಗಿದೆ.

Must Read