May 9, 2026
Saturday, May 9, 2026
spot_img

ಹಾರ್ಮುಜ್ ಜಲಸಂಧಿ ಬಳಿ ಹೊತ್ತಿ ಉರಿದ ಬೋಟ್: ಭಾರತೀಯ ನಾವಿಕ ಸಾ*ವು, ನಾಲ್ವರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಬಳಿ ಮರದ ಬೋಟ್‌ವೊಂದು ಬೆಂಕಿಗೆ ಆಹುತಿಯಾಗಿ ಮುಳುಗಿರುವ ಘಟನೆ ಸಂಭವಿಸಿದೆ. ಈ ದುರಂತದಲ್ಲಿ ದುರದೃಷ್ಟವಶಾತ್ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅವಘಡದ ಸಮಯದಲ್ಲಿ ಬೋಟ್‌ನಲ್ಲಿ ಒಟ್ಟು 18 ಮಂದಿ ಭಾರತೀಯ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ. ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಪಕ್ಕದಲ್ಲೇ ಹಾದುಹೋಗುತ್ತಿದ್ದ ಮತ್ತೊಂದು ಹಡಗು ತಕ್ಷಣವೇ ಕಾರ್ಯಪ್ರವೃತ್ತವಾಗಿ ಸಿಬ್ಬಂದಿಗಳನ್ನು ರಕ್ಷಿಸಿದೆ. ಇದರಿಂದಾಗಿ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

ಗಾಯಗೊಂಡಿರುವ ನಾಲ್ವರು ನಾವಿಕರನ್ನು ಪ್ರಸ್ತುತ ದುಬೈನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, “ನಮ್ಮ ಅಧಿಕಾರಿಗಳು ರಕ್ಷಿಸಲ್ಪಟ್ಟ ನಾವಿಕರನ್ನು ಭೇಟಿ ಮಾಡಿದ್ದಾರೆ. ಬೋಟ್ ಮಾಲೀಕರೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ಕಾನೂನು ಮತ್ತು ವೈದ್ಯಕೀಯ ನೆರವು ನೀಡಲಾಗುವುದು,” ಎಂದು ತಿಳಿಸಿದೆ.

ಹಾರ್ಮುಜ್ ಜಲಸಂಧಿಯು ಜಾಗತಿಕ ಇಂಧನ ಪೂರೈಕೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತದೆ ಮತ್ತು ಇದು ಇರಾನ್ ನಿಯಂತ್ರಣದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ಸಂಘರ್ಷ ಹಾಗೂ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಇಂತಹ ಸಮಯದಲ್ಲಿ ಈ ಅಗ್ನಿ ಅವಘಡ ಸಂಭವಿಸಿರುವುದು ಅಂತಾರಾಷ್ಟ್ರೀಯ ವಲಯದಲ್ಲಿ ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !