ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮತ್ತೊಮ್ಮೆ ಹುಸಿ ಬಾಂಬ್ ಬೆದರಿಕೆ ಕರೆಗಳ ಆತಂಕ ಶುರುವಾಗಿದೆ. ಇಂದು ಒಂದೇ ದಿನ ಬಾಗಲಕೋಟೆ, ದಾವಣಗೆರೆ, ಧಾರವಾಡ ಮತ್ತು ಕೋಲಾರ ಜಿಲ್ಲಾ ನ್ಯಾಯಾಲಯಗಳಿಗೆ ಅನುಮಾನಾಸ್ಪದ ಇ-ಮೇಲ್ ಐಡಿಗಳಿಂದ ಬಾಂಬ್ ಇಟ್ಟಿರುವುದಾಗಿ ಸಂದೇಶಗಳು ಬಂದಿವೆ. ಇದರಿಂದಾಗಿ ನ್ಯಾಯಾಂಗ ವಲಯದಲ್ಲಿ ತೀವ್ರ ಆತಂಕ ಮೂಡಿದೆ.
ಬಾಗಲಕೋಟೆಯಲ್ಲಿ ಸೈನೈಡ್ ಬಾಂಬ್ ಭೀತಿ
ಬಾಗಲಕೋಟೆ ಜಿಲ್ಲಾ ಕೋರ್ಟ್‌ಗೆ ‘ಅಂಡರ್‌ವರ್ಲ್ಡ್’ ಹೆಸರಿನ ಐಡಿಯಿಂದ ಇ-ಮೇಲ್ ಬಂದಿದ್ದು, ಮಧ್ಯಾಹ್ನ 2 ಗಂಟೆಗೆ 23 ಸೈನೈಡ್ ವಾಯು ಗುಂಡಿಗಳು ಸ್ಫೋಟಗೊಳ್ಳಲಿವೆ ಎಂದು ಹೆದರಿಸಲಾಗಿತ್ತು. ಮೊದಲು ಚಿತ್ರದುರ್ಗ ಜಡ್ಜ್‌ಗೆ ಬಂದಿದ್ದ ಈ ಮೇಲ್, ಬಳಿಕ ಬಾಗಲಕೋಟೆಗೆ ರವಾನೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಇಡೀ ಕೋರ್ಟ್ ಆವರಣವನ್ನು ಜಾಲಾಡಿದೆ.
ಕಲಾಪ ಸ್ಥಗಿತ, ಬಿಗಿ ಪೊಲೀಸ್ ಬಂದೋಬಸ್ತ್
ದಾವಣಗೆರೆ ಕೋರ್ಟ್‌ಗೆ ಕೇರಳದ ವಯನಾಡಿನಿಂದ ಮೇಲ್ ಬಂದಿದ್ದರೆ, ಕೋಲಾರ ಮತ್ತು ಧಾರವಾಡ ಜಿಲ್ಲಾ ನ್ಯಾಯಾಲಯಗಳಿಗೂ ಇ-ಮೇಲ್ ಬೆದರಿಕೆ ಕೇಳಿಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೋಲಾರದಲ್ಲಿ ಕೋರ್ಟ್ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಧಾರವಾಡದಲ್ಲೂ ವಕೀಲರು ಹಾಗೂ ಕಕ್ಷಿದಾರರು ಆಚೆ ಓಡಿ ಬಂದರು. ಸದ್ಯ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಇವೆಲ್ಲವೂ ‘ಹುಸಿ ಬಾಂಬ್ ಬೆದರಿಕೆ’ ಎಂದು ತಿಳಿದುಬಂದಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.



