July 14, 2026
Tuesday, July 14, 2026
spot_img

ಬಾಂಬ್ ಬೀಳ್ತಿರೋದು ಅಲ್ಲಿ.. ಕೆಲಸ ಹೋಗ್ತಿರೋದು ಇಲ್ಲಿ! ಫುಡ್ ಡೆಲಿವರಿ ಬಾಯ್ಸ್ ಸಂಕಷ್ಟ ಕೇಳೋರ್ಯಾರು?

ದೂರದ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ನಮ್ಮ ಬದುಕಿನ ಮೇಲೆ ಏನು ಪ್ರಭಾವ ಬೀರಬಹುದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಸತ್ಯ ಏನೆಂದರೆ, ಯುದ್ಧದ ಕಿಡಿ ಇಂದು ಸಾಮಾನ್ಯ ಜನರ ತಟ್ಟೆಯನ್ನು ತಲುಪಿದೆ. ಅದರಲ್ಲೂ ಮುಖ್ಯವಾಗಿ ನಮ್ಮ ಹಸಿವನ್ನು ನೀಗಿಸುವ ಫುಡ್ ಡೆಲಿವರಿ ಬಾಯ್ಸ್‌ಗಳ ಬದುಕು ಈಗ ತೂಗುಯ್ಯಾಲೆಯಲ್ಲಿದೆ.

ಮಾರುಕಟ್ಟೆಯಲ್ಲಿನ ಏರುಪೇರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಆರ್ಥಿಕ ಅನಿಶ್ಚಿತತೆಯಿಂದಾಗಿ ಜನರು ಈಗ ಹೊರಗಿನ ಆಹಾರ ಆರ್ಡರ್ ಮಾಡುವುದನ್ನೇ ಕಡಿಮೆ ಮಾಡಿದ್ದಾರೆ.

ಹಿಂದೆ ದಿನಕ್ಕೆ 15-20 ಆರ್ಡರ್ ಸಿಗುತ್ತಿದ್ದ ಕಡೆ, ಈಗ 5 ದಾಟುವುದೇ ಕಷ್ಟವಾಗಿದೆ. ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಕುಳಿತರೂ ಆಪ್‌ನಲ್ಲಿ “ಟಿಂಗ್” ಎಂಬ ಸೌಂಡ್ ಕೇಳುತ್ತಿಲ್ಲ.

ಯುದ್ಧದ ಕಾರಣದಿಂದ ತೈಲ ಬೆಲೆ ಏರುತ್ತಿದೆ. ಸಿಗುವ ಅಲ್ಪಸ್ವಲ್ಪ ಕಮಿಷನ್ ಹಣ ಪೆಟ್ರೋಲ್‌ಗೇ ಸರಿಯಾಗುತ್ತಿದೆ. ಕೈಗೆ ಉಳಿಯುವುದು ಶೂನ್ಯ. ಹೊಸ ಗಾಡಿ ತಗೊಂಡು ಕೆಲಸಕ್ಕೆ ಸೇರಿದವರ ಸ್ಥಿತಿಯಂತೂ ಹೇಳತೀರದು. ದುಡಿಮೆ ಇಲ್ಲದೆ ಗಾಡಿಯ ಕಂತು ಕಟ್ಟುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ.

ಜನರ ಹಸಿವು ನೀಗಿಸಲು ಓಡುವ ಈ ಹುಡುಗರು, ಇಂದು ತಮ್ಮ ಮನೆಯವರ ಹಸಿವು ನೀಗಿಸಲು ಪರದಾಡುತ್ತಿದ್ದಾರೆ.

ಯುದ್ಧ ಅಂದ್ರೆ ಕೇವಲ ಸಾವು-ನೋವು ಮಾತ್ರವಲ್ಲ, ಅದು ತಳಮಟ್ಟದ ಕಾರ್ಮಿಕರ ಬದುಕನ್ನೇ ಕಿತ್ತುಕೊಳ್ಳುವ ಮಹಾಮಾರಿ ಎಂಬುದಕ್ಕೆ ಈ ಪರಿಸ್ಥಿತಿಯೇ ಸಾಕ್ಷಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !