October 4, 2026
Sunday, October 4, 2026
spot_img

ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಧಮಾಕ: ಎರಡೇ ದಿನಕ್ಕೆ 100 ಕೋಟಿ ಗಡಿ ದಾಟಿದ ‘ದೃಶ್ಯಂ: ದಿ ಕನ್‌ಕ್ಲೂಷನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜಯ್ ದೇವಗನ್ ಅಭಿನಯದ ‘ದೃಶ್ಯಂ: ದಿ ಕನ್ಕ್ಲೂಷನ್’ ಸಿನೆಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೇಬಿಸುತಿದ್ದು, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ, ಎರಡನೇ ದಿನವೂ ತನ್ನ ಅಬ್ಬರವನ್ನು ಮುಂದುವರಿಸಿದೆ.

ಬಿಡುಗಡೆಯಾದ ಎರಡನೇ ದಿನದಂದು ಈ ಚಿತ್ರ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಅಂದಾಜು 52 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಹಬ್ಬದ ರಜಾದಿನದ ನಂತರದ ದಿನವಾಗಿದ್ದರೂ ಸಹ, ಮೊದಲ ದಿನಕ್ಕೆ ಹೋಲಿಸಿದರೆ ಗಳಿಕೆಯಲ್ಲಿ ಕೇವಲ ಶೇಕಡಾ 15 ರಷ್ಟು ಮಾತ್ರ ಕುಸಿತ ಕಂಡಿರುವುದು ಚಿತ್ರದ ಕಥಾಹಂದರ ಮತ್ತು ಕ್ರೇಜ್‌ಗೆ ಹಿಡಿದ ಕನ್ನಡಿಯಾಗಿದೆ. ಇದರೊಂದಿಗೆ, ಭಾರತದಲ್ಲಿ ಕೇವಲ ಎರಡೇ ದಿನಗಳಲ್ಲಿ ಚಿತ್ರದ ಒಟ್ಟು ಗಳಿಕೆ 113 ಕೋಟಿ ರೂಪಾಯಿ ತಲುಪಿದೆ.

ಸಾಮಾನ್ಯವಾಗಿ ಹಬ್ಬದ ದಿನದ ದೊಡ್ಡ ಗಳಿಕೆಯ ನಂತರ ಮುಂದಿನ ದಿನಗಳಲ್ಲಿ ಕಲೆಕ್ಷನ್ ತೀವ್ರವಾಗಿ ಕುಸಿಯುವುದು ಸಹಜ. ಆದರೆ ‘ದೃಶ್ಯಂ’ ವಿಷಯದಲ್ಲಿ ಪ್ರೇಕ್ಷಕರ ಪ್ರೀತಿ ಕಲೆಕ್ಷನ್ ರೂಪದಲ್ಲಿ ಹರಿದುಬರುತ್ತಿದೆ. ಭಾನುವಾರದಂದು ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಮೊದಲ ವಾರಾಂತ್ಯದ ವೇಳೆಗೆ ಭಾರತದಲ್ಲೇ ಬರೋಬ್ಬರಿ 170 ಕೋಟಿ ರೂಪಾಯಿ ಕಲೆಕ್ಷನ್ ದಾಟುವ ಅಂದಾಜಿದೆ.

ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಸ್ಪೆನ್ಸ್ ಕಥೆಗೆ ಪ್ರೇಕ್ಷಕರು ಮಾರುಹೋಗಿದ್ದಾರೆ. ಎರಡನೇ ದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 22.50 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಎರಡು ದಿನಗಳ ವಿದೇಶಿ ಒಟ್ಟು ಗಳಿಕೆ ಸುಮಾರು 39 ಕೋಟಿ ರೂ. ತಲುಪಿದೆ. ಜಾಗತಿಕವಾಗಿ ಈ ಸಿನಿಮಾ ಕೇವಲ ಎರಡೇ ದಿನಗಳಲ್ಲಿ 175 ಕೋಟಿ ರೂಪಾಯಿ ಗಳಿಸಿ ಕಲೆಕ್ಷನ್ ಸುನಾಮಿ ಎಬ್ಬಿಸಿದೆ.

Must Read