July 4, 2026
Saturday, July 4, 2026
spot_img

ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ: ಸಿಂಗಾಪುರ ಕೋರ್ಟ್‌ನಿಂದ ಖಡಕ್ ಆದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಿಕ್ಕಟ್ಟಿನಲ್ಲಿ ಸಿಲುಕಿರುವ ಪ್ರಮುಖ ಎಡ್ಟೆಕ್ (EdTech) ಕಂಪನಿ ‘ಬೈಜುಸ್’ ಸಂಸ್ಥಾಪಕ ಬೈಜು ರವೀಂದ್ರನ್‌ಗೆ ಸಿಂಗಾಪುರ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ (QIA) ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್ಸ್ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕಠಿಣ ಶಿಕ್ಷೆ ಪ್ರಕಟವಾಗಿದೆ.

ಜೈಲು ಶಿಕ್ಷೆಗೆ ಪ್ರಮುಖ ಕಾರಣಗಳು
ರವೀಂದ್ರನ್ ತಮ್ಮ ವೈಯಕ್ತಿಕ ಮತ್ತು ಕಂಪನಿಯ ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಾಲಯ ನೀಡಿದ್ದ ಸರಣಿ ಆದೇಶಗಳನ್ನು ನಿರಂತರವಾಗಿ ನಿರ್ಲಕ್ಷಿಸಿದ್ದರು. ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ರವೀಂದ್ರನ್ ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯ ಕಟು ಪದಗಳಿಂದ ತರಾಟೆಗೆ ತೆಗೆದುಕೊಂಡಿದೆ.

ಜೈಲು ಶಿಕ್ಷೆಯ ಜೊತೆಗೆ, ಕಾನೂನು ವೆಚ್ಚಗಳಿಗಾಗಿ ಸುಮಾರು 90,000 ಸಿಂಗಾಪುರ ಡಾಲರ್ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ತಕ್ಷಣವೇ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗುವಂತೆ ಸೂಚನೆ ನೀಡಲಾಗಿದೆ.

ಜಾಗತಿಕವಾಗಿ ಹೆಚ್ಚಿದ ಕಾನೂನು ಸಂಕಷ್ಟ
ಇದಕ್ಕೂ ಮುನ್ನ ಅಮೆರಿಕದ ದಿವಾಳಿತನ ನ್ಯಾಯಾಲಯವು ತನಿಖೆಗೆ ಅಸಹಕಾರ ತೋರಿದ್ದಕ್ಕಾಗಿ ರವೀಂದ್ರನ್‌ಗೆ ಸುಮಾರು 9,600 ಕೋಟಿ ಭಾರಿ ಮೊತ್ತದ ದಂಡ ವಿಧಿಸಿತ್ತು. ಭಾರತದ ಜಾರಿ ನಿರ್ದೇಶನಾಲಯವು (ED), ಬೈಜುಸ್ ಸಂಸ್ಥೆಯು ವಿದೇಶಿ ಹೂಡಿಕೆ ಪಡೆಯುವಾಗ ಸುಮಾರು 9,000 ಕೋಟಿಗೂ ಅಧಿಕ ಮೊತ್ತದ ಫೆಮಾ (FEMA) ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಗಂಭೀರ ಆರೋಪದ ಮೇಲೆ ತನಿಖೆ ನಡೆಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !