August 22, 2026
Saturday, August 22, 2026
spot_img

Cine | ಮೊದಲ ಬಾರಿಗೆ ಒಂದಾಗಲಿದ್ದಾರೆ ಕರೀನಾ-ಧನುಷ್: ವದಂತಿಗಳಿಗೆ ತೆರೆ ಎಳೆದ ನಿರ್ದೇಶಕ ಪಿ.ಎಸ್. ಮಿತ್ರನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖ್ಯಾತ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಹೊಸ ಚಿತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ದಕ್ಷಿಣ ಭಾರತದ ಸೂಪರ್‌ಸ್ಟಾರ್ ಧನುಷ್ ಒಟ್ಟಿಗೆ ನಟಿಸಲಿದ್ದಾರೆ ಎಂಬ ವದಂತಿಗಳಿಗೆ ಈಗ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ. ಖ್ಯಾತ ತಮಿಳು ನಿರ್ದೇಶಕ ಪಿ.ಎಸ್. ಮಿತ್ರನ್ ನೀಡಿರುವ ಹೊಸ ಅಪ್‌ಡೇಟ್ ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ತಮ್ಮ ಮುಂಬರುವ ‘ಸರ್ದಾರ್ 2’ ಚಿತ್ರದ ಪ್ರಚಾರದ ವೇಳೆ ಮಾಧ್ಯಮವೊಂದರ ಜತೆ ಮಾತನಾಡಿದ ಮಿತ್ರನ್, ಮಾತುಕತೆಗಳು ನಡೆಯುತ್ತಿವೆ. ಡೇಟ್ಸ್ ಹೊಂದಾಣಿಕೆಯಾಗುವುದನ್ನು ಕಾಯುತ್ತಿದ್ದೇವೆ. ಶೀಘ್ರದಲ್ಲೇ ಒಂದು ಒಳ್ಳೆಯ ಸುದ್ದಿ ಹೊರಬೀಳುವ ಭರವಸೆ ಇದೆ ಎಂದು ಹೇಳಿದ್ದಾರೆ.

ದೊಡ್ಡ ಬಜೆಟ್‌ನ ಪೌರಾಣಿಕ ಚಿತ್ರ

ವರದಿಗಳ ಪ್ರಕಾರ, ಈ ಚಿತ್ರವು ಭಾರಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪೌರಾಣಿಕ ಕಾಡಿನ ಸಾಹಸ ಕಥೆಎನ್ನಲಾಗಿದೆ. ಸದ್ಯಕ್ಕೆ ಚಿತ್ರಕಥೆಯ ಬರವಣಿಗೆಯ ಕೆಲಸಗಳು ನಡೆಯುತ್ತಿದ್ದು, ನವೆಂಬರ್ 2026 ರ ವೇಳೆಗೆ ಪ್ರೀ-ಪ್ರೊಡಕ್ಷನ್ ಮತ್ತು ಜನವರಿ 2027 ರಿಂದ ಚಿತ್ರೀಕರಣ ಆರಂಭಿಸಲು ತಂಡ ಯೋಜಿಸಿದೆ. ಈ ಚಿತ್ರದ ಮೂಲಕ ಪಿ.ಎಸ್. ಮಿತ್ರನ್ ಹಿಂದಿ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಲಿದ್ದಾರೆ.

‌ಕಹಿ ನೆನಪು ಮರೆತು ಒಂದಾಗಲಿದ್ದಾರಾ ಕರೀನಾ-ಬನ್ಸಾಲಿ?

ಈ ಚಿತ್ರ ಸೆಟ್ಟೇರಿದರೆ ಧನುಷ್ ಮತ್ತು ಕರೀನಾ ಕಪೂರ್ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಜೊತೆಯಾಗಲಿದ್ದಾರೆ. ಅಷ್ಟೇ ಅಲ್ಲದೆ, 2000ರ ದಶಕದ ಆರಂಭದಲ್ಲಿ ನಡೆದ ದೊಡ್ಡ ವಿವಾದದ ನಂತರ ಕರೀನಾ ಮತ್ತು ಬನ್ಸಾಲಿ ಒಂದಾಗುತ್ತಿರುವ ಮೊದಲ ಸಿನಿಮಾ ಇದಾಗಲಿದೆ.

ವಿವಾದ ಹಿನ್ನೆಲೆ

ಹಿಂದೆ ಸೂಪರ್ ಹಿಟ್ ‘ದೇವದಾಸ್’ ಚಿತ್ರದ ‘ಪಾರೋ’ ಪಾತ್ರಕ್ಕಾಗಿ ಬನ್ಸಾಲಿ ಅವರು ಕರೀನಾ ಅವರಿಗೆ ಸ್ಕ್ರೀನ್ ಟೆಸ್ಟ್ ಮಾಡಿದ್ದರು. ಆದರೆ ಅಂತಿಮವಾಗಿ ಆ ಪಾತ್ರಕ್ಕೆ ಐಶ್ವರ್ಯಾ ರೈ ಅವರನ್ನು ಆಯ್ಕೆ ಮಾಡಲಾಗಿತ್ತು.

ಈ ಬಗ್ಗೆ 2002 ರಲ್ಲಿ ಸಂದರ್ಶನದಲ್ಲಿ ಮಾತನಾಡಿದ್ದ ಕರೀನಾ, ʼಅವರು ನನಗೆ ಮಾಡಿದ್ದು ತಪ್ಪು. ದೇವದಾಸ್ ಚಿತ್ರಕ್ಕೆ ಸ್ಕ್ರೀನ್ ಟೆಸ್ಟ್ ನಡೆಸಿ, ಶೈನಿಂಗ್ ಅಮೌಂಟ್ ಕೂಡ ನೀಡಿ ಆಮೇಲೆ ಬೇರೆಯವರನ್ನು ಆಯ್ಕೆ ಮಾಡಿದರು. ನನ್ನ ವೃತ್ತಿಜೀವನದ ಆರಂಭದಲ್ಲಿ ಇದು ನನಗೆ ತುಂಬಾ ನೋವುಂಟು ಮಾಡಿತ್ತುʼ ಎಂದು ಬನ್ಸಾಲಿ ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ:

ಆದರೆ ಬನ್ಸಾಲಿ ಇದನ್ನು ನಿರಾಕರಿಸಿದ್ದರು. ಕರೀನಾ ಅವರೇ ನನ್ನ ಮನೆಗೆ ಬಂದು ಅವಕಾಶ ಕೇಳಿದ್ದರು. ನಾನು ಸ್ಕ್ರೀನ್ ಟೆಸ್ಟ್ ಮಾಡಿದ್ದು ನಿಜ, ಆದರೆ ಅವರನ್ನು ಆಯ್ಕೆ ಮಾಡಿಯೇ ತೀರುತ್ತೇನೆ ಎಂದು ಎಲ್ಲೂ ಸಹಿ ಹಾಕಿರಲಿಲ್ಲ. ಫೋಟೋಗಳನ್ನು ನೋಡಿದಾಗ ಪಾರೋ ಪಾತ್ರಕ್ಕೆ ಐಶ್ವರ್ಯಾ ರೈ ಅವರೇ ಸೂಕ್ತ ಎಂದು ನನಗೆ ಅನಿಸಿತು. ಕರೀನಾ ಪತ್ರಿಕೆಗಳಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರು ಎಂದು ಬನ್ಸಾಲಿ ಸ್ಪಷ್ಟನೆ ನೀಡಿದ್ದರು.

ಕರೀನಾ ಮುಂದಿನ ಚಿತ್ರ

ಕರೀನಾ ಕಪೂರ್ ಖಾನ್ ಅವರು ಸದ್ಯ ಮೇಘನಾ ಗುಲ್ಜಾರ್ ನಿರ್ದೇಶನದ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ ‘ದಾಯರಾ’ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವು ಇದೇ ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !