ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ರಸ್ತೆ ಅಪಘಾತದ ನೋವನ್ನು ಮರೆತು ಸುದೀರ್ಘ ಗ್ಯಾಪ್‌ನ ನಂತರ ಬಣ್ಣದ ಲೋಕಕ್ಕೆ ಮರಳಿರುವ ಕನ್ನಡತಿ, ನಟಿ ನಭಾ ನಟೇಶ್ ಚಿತ್ರರಂಗದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ತಮ್ಮ ಕರಿಯರ್ ಅತ್ಯುತ್ತಮ ಹಂತದಲ್ಲಿದ್ದಾಗಲೇ ಭೀಕರ ರಸ್ತೆ ಅಪಘಾತಕ್ಕೆ ಈಡಾಗಿದ್ದ ನಭಾ, ಚಿಕಿತ್ಸೆ ಹಾಗೂ ಚೇತರಿಕೆಗಾಗಿ ಸುಮಾರು 4 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿಯಬೇಕಾಗಿತ್ತು. ಇದೀಗ ಸಾಲು ಸಾಲು ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳ ಮೂಲಕ ಅವರು ಅಬ್ಬರಿಸುತ್ತಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಅವರ ಬಹುನಿರೀಕ್ಷಿತ ಪೌರಾಣಿಕ ಆಕ್ಷನ್ ಥ್ರಿಲ್ಲರ್ ಬಿಗ್ ಬಜೆಟ್ ಚಿತ್ರ ‘ನಾಗಬಂಧಂ: ದಿ ಸೀಕ್ರೆಟ್ ಟ್ರೆಷರ್’ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಂಡು ಯಶಸ್ವಿಯಾಗಿದ್ದು, ನಭಾಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.
‘ನಾಗಬಂಧಂ’ ಯಶಸ್ಸಿನ ಖುಷಿ ಮತ್ತು ಭಾವುಕ ಕ್ಷಣ
ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಡೆದ ಧನ್ಯತಾ ಸಭೆಯಲ್ಲಿ ಮಾತನಾಡಿದ ನಭಾ ನಟೇಶ್, ಕಷ್ಟದ ದಿನಗಳ ನಂತರ ತಮಗೆ ಇಷ್ಟೊಂದು ಪ್ರೀತಿ ನೀಡಿದ ಪ್ರೇಕ್ಷಕರಿಗೆ ಕಣ್ಣೀರು ಹಾಕುತ್ತಲೇ ಭಾವುಕರಾಗಿ ಧನ್ಯವಾದ ಅರ್ಪಿಸಿದ್ದಾರೆ. ಈ ಚಿತ್ರದಲ್ಲಿ ನಭಾ ‘ಪಾರ್ವತಿ’ ಎಂಬ ವಿಭಿನ್ನ ಹಾಗೂ ದೈವಿಕ ಹಿನ್ನೆಲೆಯುಳ್ಳ ವೈದಿಕ ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿಸಿದ್ದು, ಅವರ ಶಾಸ್ತ್ರೀಯ ನೃತ್ಯ ಮತ್ತು ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮುಂದಿನ ಧಮಾಕಾ: ಸಜ್ಜಾಗುತ್ತಿದೆ ‘ಸ್ವಯಂಭು’
‘ನಾಗಬಂಧಂ’ ಚಿತ್ರದ ಭರ್ಜರಿ ಸಕ್ಸಸ್ ಬೆನ್ನಲ್ಲೇ ನಭಾ ನಟೇಶ್ ನಟನೆಯ ಮತ್ತೊಂದು ಬಹುನಿರೀಕ್ಷಿತ ಹಿಸ್ಟಾರಿಕಲ್ ಬಿಗ್ ಬಜೆಟ್ ಸಿನಿಮಾ ‘ಸ್ವಯಂಭು’ ಬಿಡುಗಡೆಗೆ ಸಜ್ಜಾಗುತ್ತಿದೆ.
ಇದನ್ನೂ ಓದಿ:
ಈ ಸಿನಿಮಾದಲ್ಲಿ ನಭಾ ನಟೇಶ್ ‘ಸುಂದರವಲ್ಲಿ’ ಎಂಬ ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ರಾಜಕುಮಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ತಮ್ಮ ಪಾತ್ರ ಕೇವಲ ಗ್ಲಾಮರ್‌ಗೆ ಸೀಮಿತವಾಗಿರದೆ, ಕಥೆಯ ನಾಯಕನ ಜರ್ನಿಯನ್ನೇ ಬದಲಾಯಿಸುವಂತಹ ಅತ್ಯಂತ ಬಲಿಷ್ಠವಾದ ಪಾತ್ರವಾಗಿದೆ ಎಂದು ನಭಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸತತ ನಾಲ್ಕು ವರ್ಷಗಳ ಕಾಲ ಬೆಳ್ಳಿತೆರೆಯಿಂದ ದೂರವಿದ್ದರೂ, ಕಮ್‌ಬ್ಯಾಕ್ ಮಾಡಿದ ಮೊದಲ ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದ ದೊಡ್ಡ ಸಿನಿಮಾಗಳಾಗಿರುವುದು ನಭಾ ಸಿನಿಮಾ ಕೆರಿಯರ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಮುನ್ಸೂಚನೆ ನೀಡಿದೆ.



