ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಭಾರಿ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿರುವ ‘ಕ್ಷೇತ್ರ ಪುನರ್ ವಿಂಗಡಣೆ’ ವಿಚಾರವಾಗಿ ಎದ್ದಿರುವ ಎಲ್ಲಾ ಗೊಂದಲಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ತಿನಲ್ಲಿ ತೆರೆ ಎಳೆದಿದ್ದಾರೆ. ರಾಜ್ಯಗಳ ನಡುವೆ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನು ಅವರು ನೀಡಿದ್ದಾರೆ.
ವಿಶೇಷ ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಅದು ಉತ್ತರವಿರಲಿ, ದಕ್ಷಿಣವಿರಲಿ, ದೊಡ್ಡ ರಾಜ್ಯವಿರಲಿ ಅಥವಾ ಸಣ್ಣ ರಾಜ್ಯವಿರಲಿ. ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನನ್ನ ಗ್ಯಾರಂಟಿ” ಎಂದು ಘೋಷಿಸಿದರು. ಪೂರ್ವದಿಂದ ಪಶ್ಚಿಮದವರೆಗೆ ಭಾರತದ ಎಲ್ಲಾ ಭಾಗಗಳನ್ನು ಸಮಾನವಾಗಿ ಕಾಣಲಾಗುವುದು ಎಂದು ಅವರು ಪುನರುಚ್ಚರಿಸಿದರು.
ಇಂದು ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ನಡುವೆ ಸುಮಾರು 40 ನಿಮಿಷಗಳ ಕಾಲ ಸುದೀರ್ಘ ವಾಗ್ವಾದ ನಡೆಯಿತು. ಸಂವಿಧಾನದ (131ನೇ ತಿದ್ದುಪಡಿ) ಮಸೂದೆಯನ್ನು ಮಂಡಿಸುವ ಮೊದಲು ವಿರೋಧ ಪಕ್ಷಗಳು ಮತ ವಿಭಜನೆಗೆ ಒತ್ತಾಯಿಸಿದವು. ಅಂತಿಮವಾಗಿ ನಡೆದ ಮತದಾನದಲ್ಲಿ:
ಮಸೂದೆಯ ಪರವಾಗಿ: 251 ಮತಗಳು
ಮಸೂದೆಯ ವಿರುದ್ಧವಾಗಿ: 185 ಮತಗಳು ಬಿದ್ದವು.
ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ಕರ್ನಾಟಕದ ಸಿಎಂ ಸಿದ್ದರಾಮಯ್ಯ, ತಮಿಳುನಾಡಿನ ಎಂ.ಕೆ. ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್ ಮತ್ತು ತೆಲಂಗಾಣದ ರೇವಂತ್ ರೆಡ್ಡಿ ಅವರು ಈ ಪ್ರಕ್ರಿಯೆಯ ವಿರುದ್ಧ ಧ್ವನಿ ಎತ್ತಿದ್ದರು. ಜನಸಂಖ್ಯೆ ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಲೋಕಸಭಾ ಸೀಟುಗಳು ಸಿಕ್ಕಿ, ನಿಯಮ ಪಾಲಿಸಿದ ದಕ್ಷಿಣದ ರಾಜ್ಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕಡಿಮೆ ಆಗಬಹುದು ಎಂಬುದು ಇವರ ಪ್ರಬಲ ಆತಂಕವಾಗಿತ್ತು.
ಈ ಟೀಕೆಗಳಿಗೆ ತಿರುಗೇಟು ನೀಡಿದ ಮೋದಿ, “ಕೆಲವರು ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಸೀಮಾ ನಿರ್ಣಯವನ್ನು ವಿರೋಧಿಸುತ್ತಿದ್ದಾರೆ. ಆದರೆ ಯಾವುದೇ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಈ ಪ್ರಕ್ರಿಯೆ ನಡೆಯಲಿದೆ” ಎಂದು ಸ್ಪಷ್ಟಪಡಿಸಿದರು.



