July 23, 2026
Thursday, July 23, 2026
spot_img

371(ಜೆ) ಜಾರಿಗೆ ಆಗಿದ್ದರೂ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗದ ಹೆಸರಲ್ಲಿ ಸಿಕ್ಕಿದ್ದು ಬರೀ ಚೊಂಬು

ಹೊಸದಿಗಂತ ವರದಿ ಬೀದರ್:

ಐದು ದಶಕಗಳ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹಿತದೃಷ್ಟಿಯಿಂದ ಆರು ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಪ್ರದೇಶದ ಹಿಂದುಳಿದ ಹಣೆಪಟ್ಟಿ ಕಳಚಲು ೨೦೧೨ರಲ್ಲಿ ಸಂವಿಧಾನದ ಕಲಂ 371(ಜೆ) ಗೆ, ೯೮ನೇಯ ತಿದ್ದುಪಡಿ ತರುವ ಮೂಲಕ ಈ ಆರು ಜಿಲ್ಲೆಗಳನ್ನು ಹಿಂದುಳಿದ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿತ್ತು.

ಆದರೆ ೧೪ ವರ್ಷ ಕಳೆದರೂ 371(ಜೆ) ಅಡಿ ಉದ್ಯೋಗದ ಹೆಸರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಸಿಕ್ಕಿದ್ದು ಬರೀ ಮೋಸ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ೫೦ ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಇನ್ನೆರೆಡು ವರ್ಷಗಳಲ್ಲಿ ನಿವೃತ್ತಿ ಹೊಂದಲಿರುವವರ ಸಂಖ್ಯೆ ಸೇರಿಸಿದರೆ ಈ ಸಂಖ್ಯೆ ೬೫ ಸಾವಿರ ದಾಟಲಿದೆ. ರಾಜ್ಯ ವಿತ್ತ ಸಚಿವಾಲಯ ಈ ಕುರಿತು ಭರ್ತಿಗೆ ಅನುಮತಿ ನೀಡಿದ್ದು ಬರೀ ೨೪ ಸಾವಿರ ಹುದ್ದೆಗಳಿಗೆ.೩೭೧ಜೆ ಕಾನೂನು ಪ್ರಕಾರ ಕಲ್ಯಾಣ ಕರ್ನಾಟಕ ಭಾಗದ ಸ್ಥಳೀಯ ವೃಂದದಲ್ಲಿ ಶೇ೭೦ ಪ್ರತಿಶತ ಈ ಭಾಗದ ಆಕಾಂಕ್ಷಿಗಳಗೆ ಆಯ್ಕೆಗೆ ಪ್ರಾತಿನಿಧ್ಯ ನೀಡಬೇಕು ಹಾಗೂ ರಾಜ್ಯದ ಇನ್ನುಳಿದ ಇತರೆ ಭಾಗದಲ್ಲಿ ಶೇ. ೮ ಪ್ರತಿಶತ ಕಲ್ಯಾಣ ಕರ್ನಾಟಕ ಭಾಗದ ಆಕಾಂಕ್ಷಿಗಳಿಗೆ ಪ್ರಾತಿನಿಧ್ಯ ನೀಡಬೇಕು.

ಇಂತಹದರಲ್ಲಿ ರಾಜ್ಯ ಸರ್ಕಾರ ಈ ಹುದ್ದೆಗಳ ಭರ್ತಿ ಎಷ್ಟು ತಿಂಗಳಲ್ಲಿ ಮಾಡಲಿದೆ ಎಂದು ಸ್ಪಷ್ಟ ರೂಪುರೇಷೆಯೊಂದಿಗೆ ನಿರ್ದಿಷ್ಟ ಸಮಯ ನಿಗದಿ ಪಡಿಸಿಲ್ಲ. ಐದು ದಶಕದ ಹೊಡೆದಾಟದ ನಂತರ ಆರನೇ ದಶಕ ಕಳೆದರೂ ರಾಜ್ಯ ಸರ್ಕಾರ, ಸಿಎಂ ಡಿಕೆ ಶಿವಕುಮಾರ್ ಆಗಲೀ ಕಾಳಜಿ ವಹಿಸದಿರುವುದು ಈ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆಗಲಿ ಸಂಸದ ಸಾಗರ್ ಖಂಡ್ರೆ ಆಗಲಿ ಈ ಕುರಿತು ಒಂದೇ ಒಂದು ಪ್ರಶ್ನೆ ರಾಜ್ಯ ಸರ್ಕಾರದ ನಿಷ್ಕಾಳಜಿ ಧೊರಣೆ ಕುರಿತು ಮಾಡುತ್ತಿಲ್ಲ, ಜನರ ಹಕ್ಕಿನ ಮಾತು ರಾಜ್ಯ ಸರ್ಕಾರದ ಎದುರು ಹೇಳಲು ಸಹ ಆಗದೇ ಇರುವವರು ಏತಕ್ಕಾಗಿ ಸಚಿವ ಸ್ಥಾನದಲ್ಲಿರಬೇಕು.

ನಿರುದ್ಯೋಗ ಈ ಭಾಗದ ಜ್ವಲಂತ ಸಮಸ್ಯೆ ಕುರಿತು ನಿಷ್ಕಾಳಜಿ ತೋರುತ್ತಿರುವ ಸಚಿವ ಈಶ್ವರ ಖಂಡ್ರೆಗೆ ಕರಿ ಬಣ್ಣದ ಕೂಲಿಂಗ್ ಗ್ಲಾಸ್ ನಲ್ಲಿ ಯುವಕರ ಸಮಸ್ಯೆ ಕಣ್ಣಿಗೆ ಕಾಣುತ್ತಿಲ್ಲ, ಅಲ್ಲದೇ ಇನ್ನೋಂದು ವಿಶೇಷ ವಿಚಾರ ಕಲ್ಯಾಣ ಕರ್ನಾಟಕ ಭಾಗದಿಂದ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ 371(ಜೆ) ಅಡಿಯಲ್ಲಿ ಬಡ್ತಿ ಸಿಗಬೇಕು, ಆದರೆ ಈ ಭಾಗದ ಸರ್ಕಾರಿ ನೌಕರರನ್ನು ಬಡ್ತಿಗೆ ಕಡೆಗಣಿಸಲಾಗಿದೆ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳು ಹೊಸ ದಿಗಂತಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

ರಾಜ್ಯ ಸರ್ಕಾರದ ಈ ಭಾಗದ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ೩೭೧ಜೆ ಆರಕ್ಷಣೆಯಲ್ಲೂ ಕಡೆಗಣನೆ, ಹಾಗೂ ನೌಕರರ ಬಡ್ತಿಯಲ್ಲೂ ಸತತವಾಗಿ ಕಡೆಗಣಿಸಲಾಗುತ್ತಿದೆ.

೨೦೨೬ನೇ ಸಾಲಿಗೆ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಬರೊಬ್ಬರಿ ೨೦,೨೧೮ ಕೋಟಿ ಇದೆ, ಬರೀ ಒಂದು ಜಿಲ್ಲೆಯ ಬಜೆಟ್ ೨೧ ಸಾವಿರ ಕೋಟಿ ಆದರೆ ೬ ಜಿಲ್ಲೆಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಕೊಡುತ್ತಿರುವುದು ಬರೀ ೫ ಸಾವಿರ ಕೋಟಿ, ಅದರಲ್ಲಿ ಅರ್ಧ ಕೇಂದ್ರ ಸರ್ಕಾರದಿಂದ ಬರುತ್ತದೆ, ಅರ್ಧ ರಾಜ್ಯ ಸರ್ಕಾರದ್ದು, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬೆಂಗಳೂರು ಅಭಿವೃದ್ಧಿ ಕೋಟಿ ಕೋಟಿ ಅನುದಾನ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸ್ಪಷ್ಟವಾಗಿ ಮಲತಾಯಿ ಧೋರಣೆ ರಾಜ್ಯ ಸರ್ಕಾರ ಅನುಸರಿಸುತ್ತಿದೆ.

ಬೆಂಗಳೂರಿನಲ್ಲಾದರೆ ಹೊಸ ಹೊಸ ಎಲೆಕ್ಟ್ರಿಕ್ ಬಸ್ಸುಗಳು, ಸುಪರ್ ಲಕ್ಸುರಿ ಬಸ್ಸುಗಳು, ಮೆಟ್ರೋ ರೈಲು, ಐಟಿ ಕಂಪನಿಗಳು, ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು, ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರ ಅಲ್ಲಿ ಉಪಯೋಗಿಸಿ ಗುಜರಿಗೆ ಬಿಟ್ಟ ಬಸ್ಸುಗಳು?, ಒಂದು ಉದ್ಯೋಗ ಸೃಷ್ಟಿಸುವ ಬೃಹತ್ ಕೈಗಾರಿಕೆಗಳು ಈ ಭಾಗದಲ್ಲಿ ಇಲ್ಲ, ಇದೇನಾ ರಾಜ್ಯ ಸರ್ಕಾರದ ರಾಜ ಧರ್ಮ?

ವಿಪಕ್ಷದ ನಾಯಕರು ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಯ ಅರಿವಿದ್ದರೂ ಸಹ ಈ ಕುರಿತು ಚಕಾರ ಎತ್ತದೇ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರ್ದೈವ ಎಂದು ರೈತ ಮುಖಂಡ ವಿ.ಕೆ.ದೇಶಪಾಂಡೆ ಹೊಸ ದಿಗಂತಕ್ಕೆ ಪ್ರತಿಕ್ರಿಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !