ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜಕಾರಣದ ‘ಟ್ರಬಲ್ ಶೂಟರ್’, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಶಕ್ತಿಯುತ ನಾಯಕರಲ್ಲಿ ಒಬ್ಬರಾಗಿರುವ ಡಿಕೆಶಿ ಜನ್ಮದಿನವು ಈ ಬಾರಿ ಕೇವಲ ಸಂಭ್ರಮಾಚರಣೆಗೆ ಸೀಮಿತವಾಗಿರದೆ, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಾದ್ಯಂತ ಅವರ ಅಭಿಮಾನಿಗಳು ಅಳವಡಿಸಿರುವ “ಮುಂದಿನ ಮುಖ್ಯಮಂತ್ರಿ” ಎಂಬ ಬ್ಯಾನರ್‌ಗಳು ಹಾಗೂ ಪೋಸ್ಟರ್‌ಗಳು ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯ ಚರ್ಚೆಯನ್ನು ಮುಂಚೂಣಿಗೆ ತಂದಿವೆ. ಈ ನಡುವೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಮನೆಯ ಹೊರಗೆ ಅರ್ಚಕರು ವೇದ ಮಂತ್ರಗಳನ್ನು ಘೋಷಿಸಿ ಪೂಜೆ ಸಲ್ಲಿಸಿ, ಅವರ ಆಸೆ- ಆಕಾಂಕ್ಷೆಗಳು ಶೀಘ್ರವೇ ನೆರವೇರಲಿ ಎಂದು ಹಾರೈಸಿದ್ದಾರೆ.
ಇನ್ನು, ಮುಖ್ಯಮಂತ್ರಿ ಸಿದ್ದರಾನಯ್ಯ, ಡಿಕೆ ಶಿವಕುಮಾರ್‌ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಸಿಎಂ, “ನಿಮ್ಮ ಪಕ್ಷ ನಿಷ್ಠೆ, ಸೈದ್ಧಾಂತಿಕ ಬದ್ಧತೆಯು ಯುವ ಜನರಿಗೆ ಮಾದರಿಯಾದದ್ದು. ಜನಸೇವೆಯ ನಿಮ್ಮ ಆಶಯಕ್ಕೆ ಭಗವಂತ ದೀರ್ಘ ಆಯಸ್ಸು ಆರೂಗ್ಯವನ್ನು ನೀಡಿ ಬಲತುಂಬಲಿ ಎಂದು ಹಾರೈಸುತ್ತೇನೆ”ಎಂದು ಹೇಳಿದ್ದಾರೆ.



