July 3, 2026
Friday, July 3, 2026
spot_img

ಬೆಳಗಾವಿಗೆ ಜುಲೈ 6ರಂದು ಡಾ. ಮೋಹನ್ ಭಾಗವತ್ ಆಗಮನ; 8 ದಿನ ವಾಸ್ತವ್ಯ

ಹೊಸದಿಗಂತ ವರದಿ ಬೆಳಗಾವಿ:

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಈ ಬಾರಿ ಬೆಳಗಾವಿಯಲ್ಲಿ ನಡೆಯಲಿದ್ದು, ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಜುಲೈ 6ರಂದು ನಗರಕ್ಕೆ ಆಗಮಿಸಲಿದ್ದಾರೆ. ಅವರು ಎಂಟು ದಿನಗಳ ಕಾಲ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ತಿಳಿಸಿದ್ದಾರೆ.

ಜುಲೈ 6ರಿಂದ ವಿವಿಧ ಹಂತಗಳ ಸ್ವಯಂಸೇವಕರ ಸಭೆಗಳು ಆರಂಭವಾಗಲಿದ್ದು, ಪ್ರಮುಖ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಯು ಜುಲೈ 10ರಿಂದ 12ರವರೆಗೆ ನಡೆಯಲಿದೆ. ದೇಶದ 11 ಕ್ಷೇತ್ರಗಳು ಹಾಗೂ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಮತ್ತು ಸಹ ಕ್ಷೇತ್ರ ಪ್ರಚಾರಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಘಪ್ರೇರಿತ 32 ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳೂ ಉಪಸ್ಥಿತರಿರಲಿದ್ದಾರೆ.

ಸಭೆಯಲ್ಲಿ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಹ ಸರ್ಕಾರ್ಯವಾಹರಾದ ಡಾ. ಕೃಷ್ಣಗೋಪಾಲ್, ಸಿ. ಆರ್. ಮುಕುಂದ, ಅರುಣ್ ಕುಮಾರ್, ರಾಮದತ್ತ, ಆಲೋಕ್ ಕುಮಾರ್ ಹಾಗೂ ಅತುಲ್ ಲಿಮಯೆ ಸೇರಿದಂತೆ ಸಂಘದ ಅಖಿಲ ಭಾರತೀಯ ಕಾರ್ಯ ವಿಭಾಗದ ಪ್ರಮುಖರು ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ 2026ರ ಮಾರ್ಚ್‌ನಲ್ಲಿ ಹರಿಯಾಣದ ಸಮಾಲ್ಖಾದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಬಳಿಕ ಸಂಘ ಶಿಕ್ಷಣ ವರ್ಗಗಳ ವಿಮರ್ಶೆ, ವಾರ್ಷಿಕ ಕಾರ್ಯಯೋಜನೆಯ ಅನುಷ್ಠಾನ, ಶತಾಬ್ದಿ ವರ್ಷದ ಶಾಖಾ ವಿಸ್ತರಣೆ, ವಿಜಯದಶಮಿವರೆಗೆ ನಡೆಯಲಿರುವ ಶತಾಬ್ದಿ ಕಾರ್ಯಕ್ರಮಗಳ ಅವಲೋಕನ, ರಾಷ್ಟ್ರೀಯ ಸಮಕಾಲೀನ ವಿಷಯಗಳು ಹಾಗೂ ಮುಂಬರುವ ಜನಗಣತಿ ಕುರಿತ ಚರ್ಚೆಗಳು ನಡೆಯಲಿವೆ. ಅಲ್ಲದೆ, ಸರಸಂಘಚಾಲಕರ 2026–27ನೇ ಸಾಲಿನ ದೇಶವ್ಯಾಪಿ ಪ್ರವಾಸದ ಯೋಜನೆಯನ್ನೂ ಅಂತಿಮಗೊಳಿಸುವ ಸಾಧ್ಯತೆ ಇದೆ.
ರಾಷ್ಟ್ರೀಯ ಮಟ್ಟದ ಈ ಮಹತ್ವದ ಸಭೆಗೆ ಬೆಳಗಾವಿಯಲ್ಲಿ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !