ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಕಾಕ್‌ಪಿಟ್ ದಾಳಿ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ.
174 ಪ್ರಯಾಣಿಕರಿದ್ದ FZ1073 ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಿದ ಈ ಘಟನೆಯ ಹಿಂದೆ ಭಯೋತ್ಪಾದಕ ಉದ್ದೇಶವಿತ್ತೇ, ಪೂರ್ವಯೋಜನೆ ಅಥವಾ ಯಾರಾದರೂ ನೀಡಿದ ನಿರ್ದೇಶನವಿತ್ತೇ ಎಂಬ ಅಂಶಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ತನಿಖೆ ನಡೆಸುವ ಅಧಿಕಾರ ನಮ್ಮ ದೇಶಕ್ಕಿದೆ
ಯುಎಇ ಅಟಾರ್ನಿ ಜನರಲ್ ಹಮದ್ ಸೈಫ್ ಅಲ್ ಶಮ್ಸಿ ಅವರು ಪ್ರಕರಣದ ತನಿಖೆಗಾಗಿ ಸಾರ್ವಜನಿಕ ಅಭಿಯೋಜಕರ ವಿಶೇಷ ತಂಡವನ್ನು ರಚಿಸಿದ್ದಾರೆ. ತನಿಖಾ ತಂಡವು ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳು ಮತ್ತು ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ದಾಳಿಯ ನಿಖರ ಕಾರಣ ಹಾಗೂ ಅದರ ಹಿಂದಿನ ಉದ್ದೇಶವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದೆ.
ವಿಮಾನ ಯುಎಇಯಲ್ಲಿ ನೋಂದಣಿಯಾಗಿರುವುದರಿಂದ, ವಿದೇಶಿ ವಾಯುಪ್ರದೇಶದಲ್ಲಿ ಘಟನೆ ನಡೆದಿದ್ದರೂ ವಿಮಾನದೊಳಗಿನ ಅಪರಾಧಗಳ ಕುರಿತು ಯುಎಇ ಕಾನೂನಿನಡಿ ತನಿಖೆ ನಡೆಸುವ ಅಧಿಕಾರ ತಮ್ಮ ದೇಶಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ಈ ಘಟನೆಯಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಗಾಯಗೊಂಡಿದ್ದರು. ದಾಳಿಯ ಬಳಿಕವೂ ಕಾಕ್‌ಪಿಟ್ ಬಾಗಿಲು ತೆರೆಯಲು ಅವರು ಯಶಸ್ವಿಯಾಗಿದ್ದು, ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಒಳಗೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಯಿತು. ನಂತರ ವಿಮಾನದಲ್ಲಿದ್ದ ಪರ್ಯಾಯ ಸಿಬ್ಬಂದಿ ನಿಯಂತ್ರಣ ಪಡೆದು ತಬೂಕ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು ಎಂದು ವರದಿಯಾಗಿದೆ.
ಕರ್ತವ್ಯಪ್ರಜ್ಞೆ ಶ್ಲಾಘಿಸಿದ ಗರ್ಗಾಶ್
ಯುಎಇ ಅಧ್ಯಕ್ಷರ ಹಿರಿಯ ರಾಜಕೀಯ ಸಲಹೆಗಾರ ಅನ್ವರ್ ಗರ್ಗಾಶ್ ಅವರು ಸ್ಮಿತ್ ಮಚ್ಚಾರ್ ಅವರ ಧೈರ್ಯ ಮತ್ತು ಕರ್ತವ್ಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಅವರು ತೋರಿದ ವೃತ್ತಿಪರತೆ ಗಮನಾರ್ಹ ಎಂದು ಗರ್ಗಾಶ್ ಹೇಳಿದ್ದಾರೆ.
ಸಹ ಪೈಲಟ್ ವಿಚಾರಣೆ
ಘಟನೆಯ ನಂತರ ಮಚ್ಚಾರ್ ಅವರಿಗೆ ಸೌದಿ ಅರೇಬಿಯಾದಲ್ಲಿ ಆರಂಭಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಬುಧಾಬಿಗೆ ಸ್ಥಳಾಂತರಿಸಲಾಗಿದೆ. ಇದೇ ವೇಳೆ ದಾಳಿಗೆ ಸಂಬಂಧಿಸಿದ ಆರೋಪ ಎದುರಿಸುತ್ತಿರುವ ಸಹ ಪೈಲಟ್ ವಿಚಾರಣೆಯಲ್ಲಿದ್ದು, ತನಿಖಾಧಿಕಾರಿಗಳು ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.



