August 2, 2026
Sunday, August 2, 2026
spot_img

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ ರಹಾನೆ ಕೈ ಬಿಡಲಿಲ್ಲ ಬಿಸಿಸಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೂ ಸಹ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಅವರಿಗಾಗಿ ಪ್ರತಿ ತಿಂಗಳು ನಿಗದಿತ ಪಿಂಚಣಿ ಹಣವನ್ನು ನೀಡಲಿದೆ. 2022ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಅವಧಿಯಲ್ಲಿ ಮಾಜಿ ಕ್ರಿಕೆಟಿಗರ ಪಿಂಚಣಿ ಮೊತ್ತವನ್ನು ಪರಿಷ್ಕರಿಸಲಾಗಿತ್ತು. ಇದರ ನೇರ ಲಾಭ ಈಗ ರಹಾನೆಗೆ ಸಿಗಲಿದೆ.

ಉನ್ನತ ಶ್ರೇಣಿಯ ಪಿಂಚಣಿ ವಿಭಾಗದಲ್ಲಿ ರಹಾನೆ:

ಭಾರತದ ಪರ ಒಟ್ಟು 85 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಜಿಂಕ್ಯ ರಹಾನೆ, ಬಿಸಿಸಿಐನ ಅತ್ಯುನ್ನತ ಶ್ರೇಣಿಯ ಪಿಂಚಣಿ ವಿಭಾಗಕ್ಕೆ ಒಳಪಡುತ್ತಾರೆ. ಈ ಹಿಂದೆ 75ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಮಾಜಿ ಕ್ರಿಕೆಟಿಗರಿಗೆ ಮಾಸಿಕ 50,000 ರೂ. ಪಿಂಚಣಿ ನೀಡಲಾಗುತ್ತಿತ್ತು. ಆದರೆ ನಾಲ್ಕು ವರ್ಷಗಳ ಹಿಂದೆ ಮಾಡಲಾದ ನಿಯಮ ಪರಿಷ್ಕರಣೆಯ ನಂತರ, ಈ ಮೊತ್ತವನ್ನು ಮಾಸಿಕ 70,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಹೀಗಾಗಿ ರಹಾನೆ ನಿವೃತ್ತಿಯ ನಂತರ ಬಿಸಿಸಿಐನಿಂದ ಪ್ರತಿ ತಿಂಗಳು 70,000 ರೂ. ಪಿಂಚಣಿ ಪಡೆಯಲಿದ್ದಾರೆ.

ಆಟಗಾರರ ಹಿತ ಕಾಯುವುದು ನಮ್ಮ ಕರ್ತವ್ಯ ಎಂದಿದ್ದ ಗಂಗೂಲಿ:

ಅಂದು ಪಿಂಚಣಿ ಮೊತ್ತ ಪರಿಷ್ಕರಣೆಯ ನಿರ್ಧಾರದ ಬಗ್ಗೆ ಮಾತನಾಡಿದ್ದ ಸೌರವ್ ಗಂಗೂಲಿ, “ನಮ್ಮ ಮಾಜಿ ಕ್ರಿಕೆಟಿಗರ ಆರ್ಥಿಕ ಹಿತದೃಷ್ಟಿಯನ್ನು ಕಾಯುವುದು ಅತ್ಯಂತ ಮುಖ್ಯ. ಆಟಗಾರರೇ ನಮ್ಮ ಮಂಡಳಿಯ ಜೀವಾಳ. ಅವರ ಆಟದ ದಿನಗಳು ಮುಗಿದ ನಂತರವೂ ಅವರ ಜತೆ ನಿಲ್ಲುವುದು ನಮ್ಮ ಕರ್ತವ್ಯ” ಎಂದು ಹೇಳಿದ್ದರು. ಭಾರತದ ಪರ 85 ಟೆಸ್ಟ್, 90 ಏಕದಿನ ಹಾಗೂ 20 ಟಿ20 ಪಂದ್ಯಗಳನ್ನು ಆಡಿರುವ ರಹಾನೆ, ತಮ್ಮ ಮುಂದಿನ ವೃತ್ತಿಜೀವನದ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲವಾದರೂ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಲು ಆಸಕ್ತಿ ಹೊಂದಿರುವುದಾಗಿ ಸುಳಿವು ನೀಡಿದ್ದಾರೆ.

ಇದನ್ನೂ ಓದಿ;

ಪಿಂಚಣಿ ಸಿಗಲು ಇರುವ ಪ್ರಮುಖ ಷರತ್ತು:

ಬಿಸಿಸಿಐ ನಿಯಮಗಳ ಪ್ರಕಾರ, ರಹಾನೆ ಮಂಡಳಿಯಲ್ಲಿ (BCCI) ಯಾವುದೇ ಅಧಿಕೃತ ಹುದ್ದೆಯನ್ನು ಅಂದರೆ ಮುಖ್ಯ ಕೋಚ್ ಅಥವಾ ಆಡಳಿತಾಧಿಕಾರಿ ಜವಾಬ್ದಾರಿಯನ್ನು ವಹಿಸಿಕೊಳ್ಳದಿರುವವರೆಗೆ ಮಾತ್ರ ಈ ಪಿಂಚಣಿ ಲಭ್ಯವಿರುತ್ತದೆ. ಒಂದು ವೇಳೆ ಅವರು ಬಿಸಿಸಿಐ ಅಡಿಯಲ್ಲಿ ಸಂಬಳ ಪಡೆಯುವ ಯಾವುದೇ ಅಧಿಕೃತ ಹುದ್ದೆಯನ್ನು ಸ್ವೀಕರಿಸಿದರೆ, ಆ ಅವಧಿಯಲ್ಲಿ ಅವರ ಈ ಮಾಸಿಕ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !