ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ ಮತ್ತೆ ತಮ್ಮ ನೇರ ಮಾತುಗಳಿಂದ ಸುದ್ದಿಯಾಗಿದ್ದಾರೆ. ಐಪಿಎಲ್‌ನಲ್ಲಿ ಆಟಗಾರರ ವೈಯಕ್ತಿಕ ಕ್ಷಣಗಳನ್ನೂ ನಿರಂತರವಾಗಿ ಚಿತ್ರೀಕರಿಸಲಾಗುತ್ತಿರುವುದರ ಬಗ್ಗೆ ಆರ್‌ಸಿಬಿ ತಾರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಕಂಟೆಂಟ್ ಹೆಸರಿನಲ್ಲಿ ಆಟಗಾರರ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆರ್‌ಸಿಬಿ ಪಾಡ್‌ಕ್ಯಾಸ್ಟ್ ನಲ್ಲಿ ಮಾಯಂತಿ ಲ್ಯಾಂಗರ್ ಜೊತೆ ಮಾತನಾಡಿದ ಕೊಹ್ಲಿ, ಅಭ್ಯಾಸದ ವೇಳೆ ಕ್ಯಾಮೆರಾಗಳು ಹಿಂಬಾಲಿಸುವುದು ಆಟಗಾರರಿಗೆ ಅಸಹಜ ಪರಿಸ್ಥಿತಿ ಉಂಟುಮಾಡುತ್ತದೆ ಎಂದರು.
ಇದನ್ನೂ ಓದಿ:
ಈ ವೇಳೆ ಬಿಸಿಸಿಐ ಬಳಸುತ್ತಿದ್ದ ‘ಚಂಪಕ್’ ಎಂಬ ರೋಬೋ-ಡಾಗ್ ಘಟನೆಯನ್ನು ಅವರು ನೆನಪಿಸಿಕೊಂಡರು. ಲಖನೌ ವಿರುದ್ಧದ ಪಂದ್ಯದ ವೇಳೆ ಸ್ನೇಹಿತ ಕೇನ್ ವಿಲಿಯಮ್ಸನ್ ಜೊತೆ ಗಂಭೀರ ಮಾತುಕತೆಯಲ್ಲಿ ತೊಡಗಿದ್ದಾಗ, ರೋಬೋ-ಡಾಗ್ ಹತ್ತಿರ ಬಂದು ಚಿತ್ರೀಕರಣ ಆರಂಭಿಸಿತ್ತು ಎಂದು ಹೇಳಿದರು.
“ನಾವು ಸಾಮಾನ್ಯವಾಗಿ ಮಾತನಾಡುವ ಸ್ವಾತಂತ್ರ್ಯವೂ ಇಲ್ಲದಂತಾಗಿದೆ. ಪ್ರತಿಯೊಂದನ್ನೂ ಸೋಶಿಯಲ್ ಮೀಡಿಯಾ ಕ್ಷಣವನ್ನಾಗಿ ಮಾಡಲಾಗುತ್ತಿದೆ,” ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದರು.
ಅಭ್ಯಾಸದ ವೇಳೆ 6 ಕ್ಯಾಮೆರಾಗಳು ಹಿಂಬಾಲಿಸುತ್ತವೆ ಎಂದು ಹೇಳಿದ ಅವರು, “ನೆಟ್ಸ್‌ನಲ್ಲಿ ಅಲ್ಲ, ಪಂದ್ಯದಲ್ಲಿ ನೀಡುವ ಪ್ರದರ್ಶನದ ಆಧಾರದಲ್ಲಿ ಆಟಗಾರರನ್ನು ನಿರ್ಣಯಿಸಬೇಕು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.



