ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರ ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ ಈಗ ಎಲ್ಲರ ಗಮನ ಸೆಳೆದಿದೆ.
ಭಾರತದ ಕಡಿಮೆ ಜನಸಂದಣಿ ಇರುವ, ಇನ್ನೂ ಹೆಚ್ಚಿನವರು ಅನ್ವೇಷಿಸದ ಪ್ರವಾಸಿ ತಾಣಗಳ ಹುಡುಕಾಟದಲ್ಲಿರುವುದಾಗಿ ಹೇಳಿರುವ ಅವರು, ಈ ಬಾರಿ ಕರ್ನಾಟಕದ ಹೊನ್ನಾವರದ ನೈಸರ್ಗಿಕ ಸೌಂದರ್ಯವನ್ನು ಮನಸಾರೆ ಹೊಗಳಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಅವರು, ಕೇರಳದ ಹಿನ್ನೀರಿನ ಸೌಂದರ್ಯವನ್ನು ನಾವು ಆಗಾಗ್ಗೆ ಆಚರಿಸುತ್ತೇವೆ. ಆದರೆ ಕರ್ನಾಟಕದ ಕರಾವಳಿಯಲ್ಲೂ ಅಷ್ಟೇ ಗಮನ ಸೆಳೆಯಬೇಕಾದ ಒಂದು ಅಪರೂಪದ ತಾಣವಿದೆ ಎಂದು ಹೇಳಿದ್ದಾರೆ. ಜೋಗ ಜಲಪಾತದಲ್ಲಿ ಆರ್ಭಟಿಸುವ ಶರಾವತಿ ನದಿ, ಕೊನೆಯಲ್ಲಿ ಹೊನ್ನಾವರದ ಬಳಿ ಶಾಂತವಾಗಿ ಅರಬ್ಬೀ ಸಮುದ್ರವನ್ನು ಸೇರುವ ದೃಶ್ಯವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ಹೊನ್ನಾವರದ ಮ್ಯಾಂಗ್ರೋವ್ ಕಾಡುಗಳು, ತಿರುವು-ಮುರುವುಗಳ ಜಲಮಾರ್ಗಗಳು ಮತ್ತು ಕನ್ನಡಿಯಂತೆ ಕಾಣುವ ಹಿನ್ನೀರಿನ ಪ್ರದೇಶಗಳು ಅವರನ್ನು ಆಕರ್ಷಿಸಿವೆ. ಈ ಸೌಂದರ್ಯ ಕೇವಲ ಕಣ್ಣಿಗೆ ಹಬ್ಬವಲ್ಲ, ಪರಿಸರದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆನಂದ್ ಮಹೀಂದ್ರಾ ಅವರ ಈ ಮೆಚ್ಚುಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ‘ಇದು ನಿಜಕ್ಕೂ ಕರ್ನಾಟಕವೇ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಹೊನ್ನಾವರವನ್ನು ತಮ್ಮ ಮುಂದಿನ ಪ್ರವಾಸ ಪಟ್ಟಿಗೆ ಸೇರಿಸಿಕೊಂಡಿದ್ದಾರೆ.



