Monday, November 17, 2025

‘ಕಾಂತಾರ’ ನೋಡಿ ಅಭಿಮಾನಿಗಳ ಹುಚ್ಚಾಟ: ರಿಷಬ್ ಗೆ ತುಳುಕೂಟದಿಂದ ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರಾವಳಿಯ ದೈವರಾಧನೆ ಹಿನ್ನೆಲೆಯ ಮೇಲೆ ತೆರೆಕಂಡ ಕಾಂತಾರ ಚಾಪ್ಟರ್ 1 ಸಿನಿಮಾ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ ಬಿಡುಗಡೆಯಾದ ಈ ಚಿತ್ರವೂ ಅದೇ ರೀತಿಯ ಸಂಚಲನ ಸೃಷ್ಟಿಸುತ್ತಿದೆ. ಆದರೆ ಚಿತ್ರಮಂದಿರಗಳಲ್ಲಿ ಕೆಲವು ಅಭಿಮಾನಿಗಳ ಅತಿರೇಕದ ವರ್ತನೆ ಈಗ ತುಳುವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ತುಳುಕೂಟ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಗೆ ಪತ್ರ ಬರೆದು, ಪ್ರೇಕ್ಷಕರ ಹುಚ್ಚಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಚಿತ್ರ ವೀಕ್ಷಣೆ ವೇಳೆ ಕೆಲವು ಪ್ರೇಕ್ಷಕರು ದೈವದ ವೇಷ ಧರಿಸಿ ಓಡಾಡುವುದು, ಚಿತ್ರದಲ್ಲಿ ತೋರಿಸಿದಂತೆ ಕಿರುಚಾಟ ಮಾಡುವುದು, ದೈವದ ಆಚರಣೆಗಳನ್ನು ಹಾಸ್ಯ ಮಾಡುವ ರೀತಿಯ ವರ್ತನೆ ತೋರಿರುವುದು ಭಕ್ತಿಯ ನಂಬಿಕೆಗೆ ಧಕ್ಕೆಯಾಗಿದೆ ಎಂದು ತುಳುವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೈವದ ಮಹತ್ವವನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಆದರೆ ಪ್ರೇಕ್ಷಕರ ಅತಿರೇಕದಿಂದ ಭಾವನೆಗಳಿಗೆ ಧಕ್ಕೆಯಾಗುತ್ತಿರುವುದು ಒಪ್ಪಲಾಗದ ಸಂಗತಿಯೆಂದು ಪತ್ರದಲ್ಲಿ ತಿಳಿಸಲಾಗಿದೆ.

ಇದಕ್ಕೂ ಮೊದಲು, ಕಾಂತಾರ ಮೊದಲ ಭಾಗ ಬಿಡುಗಡೆಯಾದಾಗಲೂ ಇದೇ ರೀತಿಯ ಘಟನೆಗಳು ನಡೆದಿದ್ದು, ಆಗಲೂ ತುಳುಕೂಟ ಪೊಲೀಸರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತ್ತು. ಆ ನಂತರ ಘಟನೆಗಳು ಕಡಿಮೆಯಾಗಿದ್ದರೂ, ಇದೀಗ ಚಾಪ್ಟರ್ 1 ಬಿಡುಗಡೆಯಾದ ಬಳಿಕ ಮತ್ತೆ ಇದೇ ಸಮಸ್ಯೆ ಎದುರಾಗುತ್ತಿದೆ.

ಪ್ರಸ್ತುತ ತುಳುಕೂಟವು ಕಾನೂನು ಹೋರಾಟಕ್ಕೂ ಮುಂದಾಗುವ ನಿರ್ಧಾರ ಮಾಡಿಕೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ದೈವದ ವೇಷ ತೊಟ್ಟು ಹುಚ್ಚಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಅಭಿಮಾನಿಗಳ ಹುಚ್ಚಾಟ ಭಕ್ತಿಯ ಮೆರಗು ಹಾಳು ಮಾಡದಂತೆ ತಡೆಯಬೇಕು ಎಂಬುದು ಅವರ ನಿಲುವಾಗಿದೆ.

error: Content is protected !!