June 16, 2026
Tuesday, June 16, 2026
spot_img

ಬೆಳಗಾವಿ ಕೈಗಾರಿಕಾ ಪ್ರದೇಶದಲ್ಲಿ ಆತಂಕ: ಕಸದ ರಾಶಿಯಲ್ಲಿ ಸಿಕ್ಕಿತು 59 ಜೀವಂತ ಗುಂಡುಗಳು

ಹೊಸದಿಗಂತ ವರದಿ ಬೆಳಗಾವಿ:

ನಗರದ ಪ್ರಮುಖ ಕೈಗಾರಿಕಾ ಪ್ರದೇಶವಾದ ಉದ್ಯಮಬಾಗದಲ್ಲಿ ಕಸದ ರಾಶಿಯಿಂದ ಬರೋಬ್ಬರಿ 59 ಜೀವಂತ ಗುಂಡುಗಳು ಪತ್ತೆಯಾಗಿರುವ ಘಟನೆ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೈಗಾರಿಕಾ ವಲಯದಲ್ಲಿ ನಡೆದ ಈ ಅಚ್ಚರಿಯ ಬೆಳವಣಿಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬೆಳಗ್ಗೆ ಪಾಲಿಕೆಯ ಪೌರಕಾರ್ಮಿಕರು ಎಂದಿನಂತೆ ಉದ್ಯಮಬಾಗದ ರಸ್ತೆಯ ಬದಿಯಲ್ಲಿ ಸಂಗ್ರಹವಾಗಿದ್ದ ಕಸವನ್ನು ವಿಂಗಡಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಕಸದ ರಾಶಿಯೊಳಗೆ ಅನುಮಾನಾಸ್ಪದ ವಸ್ತುಗಳು ಕಂಡುಬಂದಿದ್ದು, ಪರಿಶೀಲಿಸಿದಾಗ ಅವು ಜೀವಂತ ಗುಂಡುಗಳಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತ ಕಾರ್ಮಿಕರು ಯಾವುದೇ ಅಪಾಯ ಸಂಭವಿಸದಂತೆ ಸ್ಥಳವನ್ನು ಸುರಕ್ಷಿತಗೊಳಿಸಿ ಉದ್ಯಮಬಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಉದ್ಯಮಬಾಗ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ. ಕಸದ ರಾಶಿಯಿಂದ ಒಟ್ಟು 59 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ಪರಿಶೀಲನೆಯಲ್ಲಿ 41 ಗುಂಡುಗಳು ಒಂದೇ ಮಾದರಿಯದ್ದಾಗಿದ್ದು, ಉಳಿದ 18 ಗುಂಡುಗಳು ಮತ್ತೊಂದು ಮಾದರಿಯದ್ದಾಗಿರುವುದು ತಿಳಿದುಬಂದಿದೆ.

ಗುಂಡುಗಳ ಸ್ಥಿತಿ ಮತ್ತು ಅವುಗಳ ತಯಾರಿಕಾ ವಿವರಗಳ ಬಗ್ಗೆ ತಜ್ಞರಿಂದ ಹೆಚ್ಚಿನ ಮಾಹಿತಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಈ ಗುಂಡುಗಳು ಕಸದ ರಾಶಿಗೆ ಹೇಗೆ ಬಂದವು ಎಂಬುದು ಇದೀಗ ತನಿಖೆಯ ಪ್ರಮುಖ ವಿಷಯವಾಗಿದೆ. ಯಾರಾದರೂ ಉದ್ದೇಶಪೂರ್ವಕವಾಗಿ ಇವುಗಳನ್ನು ಇಲ್ಲಿ ತಂದು ಬಿಸಾಡಿದ್ದಾರೆಯೇ? ಅಥವಾ ಯಾವುದಾದರೂ ಸಂಸ್ಥೆ ಅಥವಾ ವ್ಯಕ್ತಿಯಿಂದ ನಿರ್ಲಕ್ಷ್ಯದಿಂದ ಕಸದೊಂದಿಗೆ ಸೇರಿಬಿಟ್ಟಿವೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೆ, ಈ ಗುಂಡುಗಳನ್ನು ಈ ಹಿಂದೆ ಎಲ್ಲಿಯಾದರೂ ಬಳಸಲಾಗಿದೆಯೇ ಅಥವಾ ಯಾವುದಾದರೂ ಅಪರಾಧ ಚಟುವಟಿಕೆಯೊಂದಿಗೆ ಸಂಬಂಧವಿದೆಯೇ ಎಂಬ ಕೋನದಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:

ಉದ್ಯಮಬಾಗ ಪ್ರದೇಶವು ಕೈಗಾರಿಕೆಗಳು ಮತ್ತು ವಿವಿಧ ವಾಣಿಜ್ಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಹಿನ್ನೆಲೆಯಲ್ಲಿ, ಇಂತಹ ಪ್ರಮಾಣದ ಜೀವಂತ ಗುಂಡುಗಳು ಪತ್ತೆಯಾಗಿರುವುದು ಸ್ಥಳೀಯ ನಿವಾಸಿಗಳು ಹಾಗೂ ಉದ್ಯಮಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಘಟನೆಯ ಕುರಿತು ಮಾಹಿತಿ ತಿಳಿದ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಕುತೂಹಲದಿಂದ ವಿಚಾರಿಸುತ್ತಿರುವ ದೃಶ್ಯ ಕಂಡುಬಂತು.

ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಕಳೆದ ಕೆಲವು ದಿನಗಳಲ್ಲಿ ಕಸದ ರಾಶಿಯ ಬಳಿ ಸಂಶಯಾಸ್ಪದವಾಗಿ ಸಂಚರಿಸಿದ ವ್ಯಕ್ತಿಗಳು ಅಥವಾ ವಾಹನಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಅಗತ್ಯವಿದ್ದಲ್ಲಿ ಶಸ್ತ್ರಾಸ್ತ್ರ ತಜ್ಞರ ನೆರವನ್ನೂ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಗುಂಡುಗಳ ಮೂಲ ಪತ್ತೆ ಮತ್ತು ಅವುಗಳನ್ನು ಕಸದ ತೊಟ್ಟಿಗೆ ಎಸೆದವರ ಗುರುತು ಪತ್ತೆಗಾಗಿ ಸಮಗ್ರ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ನಿಖರ ಮಾಹಿತಿ ತನಿಖೆ ಪೂರ್ಣಗೊಂಡ ಬಳಿಕವೇ ಬಹಿರಂಗವಾಗುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !