ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ರಾಜಕಾರಣ 59 ವರ್ಷಗಳ ಬಳಿಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಸುದೀರ್ಘ ಕರಾಳ ರಾತ್ರಿಯ ನಂತರ ಕಾಂಗ್ರೆಸ್ ಶಾಸಕರು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಬ್ಬರು ಶಾಸಕರು ಪ್ರಮಾಣವಚನ ಸ್ವೀಕಾರ
ಈ ಕುರಿತು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮಾಹಿತಿ ನೀಡಿದ್ದು, ಕಾಂಗ್ರೆಸ್ ಶಾಸಕರಾದ ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್ ಅವರು ನಾಳೆ ಮುಖ್ಯಮಂತ್ರಿ ವಿಜಯ್ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಾಲಿಗೆ ಐತಿಹಾಸಿಕ ಕ್ಷಣ
1967 ರಲ್ಲಿ ಕಾಂಗ್ರೆಸ್ ಕಡೆಯದಾಗಿ ತಮಿಳುನಾಡಿನಲ್ಲಿ ಅಧಿಕಾರದಲ್ಲಿತ್ತು. ಅದಾದ ಬಳಿಕ ದ್ರಾವಿಡ ಪಕ್ಷಗಳ ಅಬ್ಬರದಿಂದಾಗಿ ಕಾಂಗ್ರೆಸ್ ಕೇವಲ ಮೈತ್ರಿಗಷ್ಟೇ ಸೀಮಿತವಾಗಿತ್ತು. ಇದೀಗ ಆರು ದಶಕಗಳ ನಂತರ ಸರ್ಕಾರ ಸೇರುತ್ತಿದ್ದಾರೆ. ಇದು ನಮಗೆ ಅತ್ಯಂತ ಐತಿಹಾಸಿಕ ಕ್ಷಣವಾಗಿದೆ. ಕಾಂಗ್ರೆಸ್ ತಮಿಳುನಾಡು ಸಚಿವ ಸಂಪುಟವನ್ನು ಸೇರುತ್ತಿದೆ. ಸಚಿವರಾಗಲಿರುವ ಇಬ್ಬರೂ ನಾಯಕರು ತಮಿಳುನಾಡಿನ ಜನರ ಆಶೋತ್ತರಗಳನ್ನು ಈಡೇರಿಸಲಿದ್ದಾರೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನಪರ ಹಾಗೂ ಕಲ್ಯಾಣ ಆಡಳಿತದ ದೃಷ್ಟಿಕೋನಕ್ಕೆ ಸಾಥ್ ನೀಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
TVK ಜೊತೆ ಮೈತ್ರಿ
ತಮಿಳುನಾಡಿನಲ್ಲಿ DMK ಪಕ್ಷದೊಂದಿಗೆ ಮೈತ್ರಿ ಹೊಂದಿದ್ದ ಕಾಂಗ್ರೆಸ್ ಈ ಬಾರಿ ನಟ ವಿಜಯ್ ಅವರ ಹೊಸ ಪಕ್ಷವಾದ TVK ಜೊತೆ ಆಡಳಿತ ಹಂಚಿಕೆ ಮಾಡಿಕೊಂಡಿದೆ.



