May 18, 2026
Monday, May 18, 2026
spot_img

ರಾಷ್ಟ್ರೀಯ ‘ಜಾನಪದ ರತ್ನ ಪ್ರಶಸ್ತಿ’ ಮುಡಿಗೇರಿಸಿಕೊಂಡ ಜಾನಪದ ಕಲಾವಿದೆ ಹೊನ್ನಮ್ಮ

ಹೊಸದಿಗಂತ ವರದಿ ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಕುರುಬರಹಳ್ಳಿಯ ಹಿರಿಯ ಜಾನಪದ ಕಲಾವಿದೆ ಹೊನ್ನಮ್ಮನವರು ರಾಷ್ಟ್ರೀಯ ಜಾನಪದ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹೊನ್ನಮ್ಮನವರು ಜನಪದ ಕ್ಷೇತ್ರದಲ್ಲಿ ವಿಶೇಷವಾಗಿ ಸೋಬಾನೆ ಪದಗಳು, ಭಜನೆ ಪದಗಳು, ಬೀಸುವಕಲ್ಲಿನ ಪದಗಳು, ಹೊಳ್ಳಕ್ಕಿ ಕುಟ್ಟುವ ಪದಗಳು, ದಾರಿ ಮುಹೂರ್ತದ ಪದಗಳು, ಬಾಸಿಂಗ ಕಟ್ಟುವ ಪದಗಳು, ಹಸೆ ಬರೆಯುವ ಪದಗಳು, ಗಂಗೆ ಗೌರೀ ಪದಗಳು, ಮದಕರಿ ನಾಯಕನ ಪದಗಳು, ಮದುವೆ ಮನೆಯ ಹಾಡುಗಳು, ದೇವರ ಮೇಲಿನ ಪದಗಳು, ಜನಪದ ಗೀತೆಗಳು, ಕತೆಗಳು, ಒಗಟುಗಳು ಇತ್ಯಾದಿ ಸುಮಾರು ಹಾಡುಗಳನ್ನು 50 ವರ್ಷಗಳಿಂದ ಹಾಡಿ ಸಾಧನೆ ಮಾಡಿದ್ದಾರೆ.

85ರ ಇಳಿ ವಯಸ್ಸಿನ ಜನಪದ ಕಲಾಸೇವೆ

ಆಕಾಶವಾಣಿ ಚಿತ್ರದುರ್ಗ, ಭದ್ರಾವತಿ, ಚಿತ್ರದುರ್ಗದ ದುರ್ಗೋತ್ಸವ, ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ, ಸಿರಿಗೆರೆ ಮಠದ ತರಳಬಾಳು ಹುಣ್ಣಿಮೆ, ಕಬೀರಾನಂದ ಮಠದ ಶಿವರಾತ್ರಿ ಉತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪದ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ರಾಜ್ಯ ಮಟ್ಟದ ಭಜನಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ಇವರ ಕಲಾ ಸೇವೆಯನ್ನು ಪರಿಗಣಿಸಿ ಧಾರವಾಡ ನಗರದ ಪ್ರತಿಫಲ ಪೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊನ್ನಮ್ಮನವರಿಗೆ ರಾಷ್ಟ್ರೀಯ ಜಾನಪದ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. 85ರ ಇಳಿ ವಯಸ್ಸಿನ ಅವರ ಜನಪದ ಕಲಾಸೇವೆ ಜನಪದ ಉಳಿಸಿ ಬೆಳೆಸುವ ಪ್ರಯತ್ನ ಜನಪದ ಲೋಕಕ್ಕೆ ಮಾದರಿಯಾಗಿದೆ.

ಇದನ್ನೂ ಓದಿ:

ಪ್ರತಿಫಲ ಪೌಂಡೇಶನ್ ಸಮ್ಮೇಳನದಲ್ಲಿ ರಾಜ್ಯದ ಹಲವು ಗಣ್ಯರು, ಸಾಹಿತಿಗಳು, ಕಲಾವಿದರು ಹಾಗೂ ಸಂಘಟಕರು ಬೃಹತ್ ಮಟ್ಟದ ಸಮಾರಂಭದಲ್ಲಿ ಹೊನ್ನಮ್ಮನವರ ಸಾಧನೆಯನ್ನು ಶ್ಲಾಘಿಸಿದರು. ಈ ಪ್ರಶಸ್ತಿ ಲಭಿಸಿರುವುದು ಕುರುಬರಹಳ್ಳಿ ಗ್ರಾಮಕ್ಕೆ ಹೆಮ್ಮೆ ತಂದಿದೆ ಎಂದು ಜಾನಪದ ಕಲಾವಿದರು ಶುಭ ಹಾರೈಸಿದ್ದಾರೆ ಎಂದು ಪ್ರತಿಫಲ ಪೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಪೂಜಾ ಹ. ಬಡಿಗೇರ್ ತಿಳಿಸಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !