May 29, 2026
Friday, May 29, 2026
spot_img

ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ: ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆಶಿ ಭಾವುಕ ಪೋಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ನೀಡಿದ ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಅತ್ಯಂತ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇಬ್ಬರ ನಡುವಿನ ಆತ್ಮೀಯ ಬಾಂಧವ್ಯವನ್ನು ಬಿಂಬಿಸುವ ವಿಶೇಷ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯ ಅವರ ರಾಜಕೀಯ ಸಾಧನೆಯನ್ನು ಕೊಂಡಾಡಿದ್ದಾರೆ.

“ದೇವರು ಅವಕಾಶ ಮಾತ್ರ ಕೊಡುತ್ತಾನೆ”

ಡಿಕೆಶಿ ತಮ್ಮ ಪೋಸ್ಟ್‌ನಲ್ಲಿ, “ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ನಮ್ಮ ಸಿದ್ದರಾಮಯ್ಯನವರು” ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಸಾಮಾನ್ಯ ಹಳ್ಳಿಯೊಂದರಲ್ಲಿ ಹುಟ್ಟಿ, ಜನಪರ ಹೋರಾಟಗಳ ಮೂಲಕ ರಾಜಕೀಯಕ್ಕೆ ಬಂದು, ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯ ಅವರ ಸಾಧನೆ ಅನನ್ಯ ಎಂದು ಗುಣಗಾನ ಮಾಡಿದ್ದಾರೆ.

ಹೆಗಲಿಗೆ ಹೆಗಲು ಕೊಟ್ಟ ನಾಯಕ

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಹಾಗೂ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಜನಮಾನಸದಲ್ಲಿ ನೆಲೆಸಿರುವ ಸಿದ್ದರಾಮಯ್ಯ ಅವರು ಭಾರತೀಯ ರಾಜಕಾರಣದ ಧೀಮಂತ ನಾಯಕ ಎಂದು ಡಿಕೆ ಶಿವಕುಮಾರ್ ಬಣ್ಣಿಸಿದ್ದಾರೆ. “2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೂ ಇಂದಿನವರೆಗೆ, ಸಿದ್ದರಾಮಯ್ಯನವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಜೊತೆಯಾಗಿ ನಿಂತಿದ್ದಾರೆ. ಅವರ ಆಡಳಿತದಲ್ಲಿ ನಾನು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದು ನನ್ನ ಭಾಗ್ಯ” ಎಂದು ನೆನೆದಿದ್ದಾರೆ.

ಅವರ ಸುಮಾರು ಐವತ್ತು ವರ್ಷಗಳ ಅಗಾಧ ರಾಜಕೀಯ ಅನುಭವ, ಸಾಮಾಜಿಕ ಕಳಕಳಿ ಮತ್ತು ಜನಪರ ಯೋಜನೆಗಳು ಸದಾ ಸ್ಮರಣೀಯ ಎಂದಿರುವ ಡಿಕೆಶಿ, ಮುಂದಿನ ದಿನಗಳಲ್ಲೂ ರಾಜ್ಯದ ಹಿತದೃಷ್ಟಿಯಿಂದ ಹಾಗೂ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಅವರ ಮಾರ್ಗದರ್ಶನ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತಾ, “ಕರ್ನಾಟಕದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯೋಣ” ಎಂದು ಕರೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !