ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಸಹಿತ ಕೇರಳದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸಲು ಯೋಜಿಸುತ್ತಿರುವವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.
ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ದರವನ್ನು ಕಡಿತಗೊಳಿಸುವ ಪ್ರಸ್ತಾವವನ್ನು ಕರಡು ಹಣಕಾಸು ಮಸೂದೆಯಲ್ಲಿ ಸೇರಿಸಲಾಗಿದ್ದು, ಇದರಿಂದ ಇ-ಆಟೋರಿಕ್ಷಾ ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆ ಇಳಿಯುವ ನಿರೀಕ್ಷೆ ಮೂಡಿದೆ.
ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಈ ತೆರಿಗೆ ರಿಯಾಯಿತಿಯನ್ನು ಘೋಷಿಸಿದೆ. ಕರಡು ಹಣಕಾಸು ಮಸೂದೆಯ ಪ್ರಕಾರ, 10 ಲಕ್ಷ ರೂ.ವರೆಗಿನ ಖಾಸಗಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆಯನ್ನು ಈಗಿನ ಶೇ.5ರಿಂದ ಶೇ.3ಕ್ಕೆ ಇಳಿಸಲಾಗುತ್ತಿದೆ. ಇದರಿಂದ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಹಾಗೂ ಇ-ಆಟೋ ಖರೀದಿಸುವವರಿಗೆ ನೇರ ಲಾಭವಾಗುವ ಸಾಧ್ಯತೆ ಇದೆ. ಇದರ ಜೊತೆಗೆ 10 ಲಕ್ಷದಿಂದ 20 ಲಕ್ಷ ರೂ.ವರೆಗಿನ ಎಲೆಕ್ಟ್ರಿಕ್ ವಾಹನಗಳಿಗೆ ಶೇ.5 ರಸ್ತೆ ತೆರಿಗೆ ಹಾಗೂ 20 ಲಕ್ಷದಿಂದ 40 ಲಕ್ಷ ರೂ.ವರೆಗಿನ ವಾಹನಗಳಿಗೆ ಶೇ.10 ರಸ್ತೆ ತೆರಿಗೆ ವಿಧಿಸುವ ಪ್ರಸ್ತಾವವೂ ಕರಡು ಮಸೂದೆಯಲ್ಲಿದೆ.
ಇದನ್ನೂ ಓದಿ:
ಆದರೆ ದುಬಾರಿ ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ತೆರಿಗೆ ಹೆಚ್ಚಿಸಿದೆ. 40 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಐಷಾರಾಮಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆಯನ್ನು ಶೇ.10ರಿಂದ ಶೇ.15ಕ್ಕೆ ಏರಿಸಲಾಗಿದೆ. ಈ ಪರಿಷ್ಕೃತ ತೆರಿಗೆ ದರಗಳು ಖಾಸಗಿ ಬಳಕೆಗಾಗಿ ಖರೀದಿಸುವ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಅನ್ವಯವಾಗಲಿವೆ ಎಂದು ಕರಡು ಹಣಕಾಸು ಮಸೂದೆಯಲ್ಲಿ ತಿಳಿಸಲಾಗಿದೆ.
ಹಣಕಾಸು ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದ ಬಳಿಕ ಹೊಸ ತೆರಿಗೆ ದರಗಳು ಜಾರಿಗೆ ಬರಲಿವೆ. ಈ ಕ್ರಮದಿಂದ ಕೇರಳದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದ್ದು, ವಿಶೇಷವಾಗಿ ಸಾಮಾನ್ಯ ಗ್ರಾಹಕರು ಕಡಿಮೆ ವೆಚ್ಚದಲ್ಲಿ ಇ-ಆಟೋ ಹಾಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸಲು ಅನುಕೂಲವಾಗಲಿದೆ.



