July 25, 2026
Saturday, July 25, 2026
spot_img

ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಶುಭಾರಂಭ: ಭಾರತದ ಪದಕದ ಖಾತೆ ತೆರೆದ ಪೋಲಿಯೊ ಪೀಡಿತ ಕ್ರೀಡಾಪಟು ಝಂದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜುಲೈ 24 ರಂದು ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿರುವ ಕಾಮನ್‌ವೆಲ್ತ್ ಗೇಮ್ಸ್ (CWG 2026) ಕ್ರೀಡಾಕೂಟದ ಮೊದಲ ದಿನವೇ ಭಾರತದ ಪದಕದ ಬೇಟೆ ಆರಂಭವಾಗಿದೆ. ಪುರುಷರ ಹೆವಿವೇಯ್ಟ್‌ ಪ್ಯಾರಾ ಪವರ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಹೆಮ್ಮೆಯ ಪ್ಯಾರಾ ಅಥ್ಲೀಟ್, ಪೋಲಿಯೊ ಪೀಡಿತ ಝಂದು ಕುಮಾರ್ ಭರ್ಜರಿ ಪ್ರದರ್ಶನ ನೀಡಿ ಕಂಚಿನ ಪದಕ ಪಡೆದಿದ್ದಾರೆ. ಈ ಮೂಲಕ ಈ ಬಾರಿಯ ಜಾಗತಿಕ ಕ್ರೀಡಾಕೂಟದಲ್ಲಿ ಭಾರತದ ಪದಕದ ಖಾತೆಯನ್ನು ತೆರೆದಿದ್ದಾರೆ.‌

ವಿಕಲಚೇತನತೆಯನ್ನೇ ಸೋಲಿಸಿ ಇತಿಹಾಸ ಬರೆದ 28ರ ಹರೆಯದ ವೀರ:

28 ವರ್ಷದ ಝಂದು ಕುಮಾರ್ ಪೋಲಿಯೊ ಪೀಡಿತರಾಗಿದ್ದರೂ ತಮ್ಮ ದೈಹಿಕ ದೌರ್ಬಲ್ಯವನ್ನು ಮರೆತು ಕಠಿಣ ಪರಿಶ್ರಮದಿಂದ ಇತಿಹಾಸ ನಿರ್ಮಿಸಿದ್ದಾರೆ. ಅತ್ಯಂತ ರೋಚಕವಾಗಿ ನಡೆದ ಪವರ್‌ಲಿಫ್ಟಿಂಗ್ ಸ್ಪರ್ಧೆಯ ಮೊದಲ ಪ್ರಯತ್ನದಲ್ಲಿ 181 ಕೆ.ಜಿ ಹಾಗೂ ಎರಡನೇ ಪ್ರಯತ್ನದಲ್ಲಿ ಬರೋಬ್ಬರಿ 190 ಕೆ.ಜಿ ತೂಕವನ್ನು ಅತ್ಯಂತ ಯಶಸ್ವಿಯಾಗಿ ಎತ್ತಿ ಎಲ್ಲರ ಹುಬ್ಬೇರಿಸಿದರು. ಆದರೆ, ಮೂರನೇ ಪ್ರಯತ್ನದಲ್ಲಿ 196 ಕೆ.ಜಿ ತೂಕ ಎತ್ತುವಲ್ಲಿ ಸ್ವಲ್ಪದರಲ್ಲೇ ವಿಫಲರಾದ ಕಾರಣ ಒಟ್ಟು 130.9 ಪಾಯಿಂಟ್‌ಗಳನ್ನು ಪಡೆದು ಕರತಾಡನದ ನಡುವೆ ಮೂರನೇ ಸ್ಥಾನಕ್ಕೆ  ತೃಪ್ತಿಪಟ್ಟುಕೊಂಡರು.

ನೈಜೀರಿಯಾಗೆ ಚಿನ್ನ, ಬ್ರಿಟನ್‌ಗೆ ಬೆಳ್ಳಿ:

ಈ ತೀವ್ರ ಪೈಪೋಟಿಯ ಸ್ಪರ್ಧೆಯಲ್ಲಿ ನೈಜೀರಿಯಾದ ಇಡ್ರಿಸ್ ರಿಲುವಾನ್ ಒಟ್ಟು 132.8 ಪಾಯಿಂಟ್‌ಗಳೊಂದಿಗೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಬ್ರಿಟನ್‌ನ ಮ್ಯಾಥ್ಯ ಹಾರ್ಡಿಂಗ್ 131 ಪಾಯಿಂಟ್ ಗಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಇದನ್ನೂ ಓದಿ:

ಭಾರತದ ಸುಧೀರ್ ಹಾಗೂ ಅಶೋಕ್‌ಗೆ ನಿರಾಸೆ:

ಇದೇ ಹೆವಿವೇಯ್ಟ್ ವಿಭಾಗದ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಪ್ರಮುಖ ಕ್ರೀಡಾಪಟು ಸುಧೀರ್ ಅವರು ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದೆ 114.1 ಪಾಯಿಂಟ್‌ಗಳೊಂದಿಗೆ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮತ್ತೊಂದೆಡೆ, ಕ್ರೀಡಾಕೂಟದ ಮೊದಲ ದಿನ ನಡೆದ ಮತ್ತೊಂದು ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಭರವಸೆಯ ಆಟಗಾರ ಅಶೋಕ್‌ ಮಲಿಕ್‌ ಕಠಿಣ ಹೋರಾಟ ನಡೆಸಿದರೂ ಕೇವಲ ಕೆಲವೇ ಅಂಕಗಳ ಅಂತರದಿಂದ 4ನೇ ಸ್ಥಾನ ಪಡೆದು ಕಂಚಿನ ಪದಕದಿಂದ ವಂಚಿತರಾಗಬೇಕಾಯಿತು. ಸದ್ಯ ಝಂದು ಕುಮಾರ್ ಈ ಅದ್ಭುತ ಸಾಧನೆಗೆ ದೇಶಾದ್ಯಂತ ಕ್ರೀಡಾ ಪ್ರೇಮಿಗಳು ಮತ್ತು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !