ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 155 ರನ್ಗಳಿಸಿದೆ. ಈ ಮೂಲಕ ಬೆಂಗಳೂರು ಗೆಲುವಿಗೆ ಸಾಧಾರಣ ಗುರಿ ನೀಡಿದೆ.
ಫೈನಲ್ ನಲ್ಲಿ ಕೈಕೊಟ್ಟ ನಾಯಕ
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಗುಜರಾತ್ ಟೈಟನ್ಸ್ ತಂಡಕ್ಕೆ ಉತ್ತಮ ಆರಂಭ ದೊರಕಿಲ್ಲ. ಆರಂಭಿಕರಾದ ಸಾಯಿ ಸುದರ್ಶನ್ 12 ರನ್ ಗಳಿಸಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರೆ, ನಾಯಕ ಶುಭ್‌ಮನ್ ಗಿಲ್ 10 ರನ್ ಗೆ ಔಟಾಗುವ ಮೂಲಕ ಫೈನಲ್ ಮ್ಯಾಚ್ ನಲ್ಲಿ ನಿರಾಸೆ ಮೂಡಿಸಿದರು.
ಬಳಿಕ ಬಂದ ನಿಶಾಂತ್ ಸಿಂಧು 20 ರನ್ ಹಾಗೂ ವಿಕೆಟ್ ಕೀಪರ್ ಜೋಸ್ ಬಟ್ಲರ್ 19 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದರೂ ಆರ್‌ಸಿಬಿ ಬೌಲರ್‌ಗಳ ಎದುರು ಎಡವಿದರು.
ತಂಡಕ್ಕೆ ವಾಷಿಂಗ್ಟನ್ ಸುಂದರ್ ಆಸರೆ
ಅತ್ತ ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ವಾಷಿಂಗ್ಟನ್ ಸುಂದರ್ ತಾಳ್ಮೆಯ ಆಟ ಪ್ರದರ್ಶಿಸಿದರು. ಅವರು 37 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಭರ್ಜರಿ 50 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಇವರಿಗೆ ಸಾಥ್ ನೀಡಿದ ಅರ್ಶದ್ ಖಾನ್ 15 ರನ್ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಉಳಿದಂತೆ ರಾಹುಲ್ ತೆವಾಟಿಯಾ 7, ಜೇಸನ್ ಹೋಲ್ಡರ್ 7 ಮತ್ತು ರಶೀದ್ ಖಾನ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಆರ್‌ಸಿಬಿ ಪರ ಭರ್ಜರಿ ಬೌಲಿಂಗ್
ಬೆಂಗಳೂರು ತಂಡದ ಪರ ರಾಸಿಖ್ ಸಲಾಮ್ ದಾರ್ 4 ಓವರ್‌ಗಳಲ್ಲಿ ಕೇವಲ 27 ರನ್ ನೀಡಿ ಪ್ರಮುಖ 3 ವಿಕೆಟ್ ಕಸಿದು ಗುಜರಾತ್ ತಂಡಕ್ಕೆ ದೊಡ್ಡ ಬ್ರೇಕ್ ನೀಡಿದರು. ಅನುಭವಿ ಭುವನೇಶ್ವರ್ ಕುಮಾರ್ 2 ಮತ್ತು ಜೋಶ್ ಹ್ಯಾಜಲ್‌ವುಡ್ 2 ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಸ್ಪಿನ್ನರ್ ಕೃನಾಲ್ ಪಾಂಡ್ಯ 1 ವಿಕೆಟ್ ಪಡೆದರು.



