November 19, 2026
Thursday, November 19, 2026
spot_img

ಗೃಹಲಕ್ಷ್ಮೀ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಪಾಪಿ ಮೊಮ್ಮಗ: ಶವವನ್ನು ಗೋಣಿಚೀಲದಲ್ಲಿ ತುಂಬಿ ಡ್ಯಾಂಗೆ ಎಸೆದು ಕ್ರೌರ್ಯ

ಹೊಸದಿಗಂತ ವರದಿ ಬೆಳಗಾವಿ:

 ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ ಬರುತ್ತಿದ್ದ ಹಣದಲ್ಲಿ ಪಾಲು ನೀಡಲಿಲ್ಲ ಎಂಬ ಕಾರಣಕ್ಕೆ ಸ್ವಂತ ಅಜ್ಜಿಯನ್ನೇ ಮೊಮ್ಮಗನೊಬ್ಬ ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಗೋಣಿ ಚೀಲದಲ್ಲಿ ಕಲ್ಲುಗಳೊಂದಿಗೆ ಕಟ್ಟಿ ಜಲಾಶಯಕ್ಕೆ ಎಸೆದಿರುವ ಅಮಾನವೀಯ ಘಟನೆ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮವ್ವಾ ಬಾಲಪ್ಪಾ ಸನದಿ (78) ಕೊಲೆಯಾದ ವೃದ್ಧೆ. ಕೊಲೆ ಆರೋಪದ ಮೇಲೆ ಅವರ ಮೊಮ್ಮಗ ಭೀಮಪ್ಪಾ ರಾಮಪ್ಪಾ ಸನದಿ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹಣಕ್ಕಾಗಿ ಅಜ್ಜಿಯೊಂದಿಗೆ ಜಗಳ

ಹಮ್ಮವ್ವಾ ಅವರಿಗೆ ಗೃಹಲಕ್ಷ್ಮೀ ಯೋಜನೆಯಡಿ ಬರುತ್ತಿದ್ದ ಹಣದಲ್ಲಿ ತನಗೂ ಪಾಲು ನೀಡಬೇಕೆಂದು ಮೊಮ್ಮಗ ಭೀಮಪ್ಪಾ ಕಳೆದ ಕೆಲವು ವರ್ಷಗಳಿಂದ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ನ.10ರಂದು ಪಾಶ್ಚಾಪುರ ಸಂತೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ವೃದ್ಧೆ ಮರಳಿ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು.

ನ.15ರಂದು ಜಿನರಾಳ ಗ್ರಾಮದ ಘಟಪ್ರಭಾ ನದಿ ಜಲಾಶಯದ ಹಿನ್ನೀರಿನಲ್ಲಿ ಎರಡು ಗೋಣಿ ಚೀಲಗಳಲ್ಲಿ ಕಲ್ಲುಗಳೊಂದಿಗೆ ಕಟ್ಟಿದ್ದ ವೃದ್ಧೆಯ ಶವ ಪತ್ತೆಯಾಗಿತ್ತು. ಈ ಕುರಿತು ಮೃತಳ ಪುತ್ರಿ ಭೀಮವ್ವಾ ಈರನಟ್ಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಗುಡ್ಡದಲ್ಲಿ ಕತ್ತು ಹಿಸುಕಿ ಕೊಲೆ

ಪೊಲೀಸರ ತನಿಖೆಯಲ್ಲಿ ಹೊರಬಂದ ಮಾಹಿತಿಯಂತೆ, ನ.10ರಂದು ಅಜ್ಜಿಯನ್ನು ಬೈಕ್ನಲ್ಲಿ ಕರೆದೊಯ್ದ ಆರೋಪಿ ಗವಿಸಿದ್ದೇಶ್ವರ ಗುಡ್ಡದಲ್ಲಿ ಗೃಹಲಕ್ಷ್ಮೀ ಹಣದ ವಿಚಾರವಾಗಿ ಮತ್ತೆ ಜಗಳ ತೆಗೆದಿದ್ದಾನೆ. ಹಣ ನೀಡಲು ನಿರಾಕರಿಸಿದ ಅಜ್ಜಿಯನ್ನು ಕೆಳಕ್ಕೆ ತಳ್ಳಿ, ಕೈ ಹಾಗೂ ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಬಳಿಕ ಪಾಶ್ಚಾಪುರಕ್ಕೆ ತೆರಳಿ ಎರಡು ಗೋಣಿ ಚೀಲ ಖರೀದಿಸಿ ತಂದಿದ್ದಾನೆ. ಅಜ್ಜಿಯ ಬಳಿಯಿದ್ದ ₹2,300 ನಗದು ಹಾಗೂ ಕೊರಳಲ್ಲಿದ್ದ ಎರಡು ಚಿನ್ನದ ಸರಗಳನ್ನು ತೆಗೆದುಕೊಂಡು, ಶವವನ್ನು ಗೋಣಿ ಚೀಲಗಳಲ್ಲಿ ತುಂಬಿದ್ದಾನೆ. ರಾತ್ರಿ ಬೈಕ್ನಲ್ಲಿ ಶವ ಸಾಗಿಸಿ ಜಿನರಾಳ ಗ್ರಾಮದ ಡ್ಯಾಂ ಹಿನ್ನೀರಿಗೆ ಕೊಂಡೊಯ್ದು, ಗೋಣಿ ಚೀಲಗಳಿಗೆ ದೊಡ್ಡ ಕಲ್ಲುಗಳನ್ನು ಕಟ್ಟಿ ನೀರಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ:

ಆರೋಪಿ ನ್ಯಾಯಾಂಗ ಬಂಧನಕ್ಕೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಮಕನಮರಡಿ ಠಾಣೆಯ ಇನ್ಸ್ಪೆಕ್ಟರ್ ಜಾವೀದ್ ಎಫ್. ಮುಶಾಪುರಿ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Must Read

Skip to toolbar