ಗರ್ಭಧಾರಣೆ ಎಂಬುದು ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯಂತ ಸುಂದರ ಹಾಗೂ ಮರೆಯಲಾಗದ ಪಯಣ. ಈ ಒಂಬತ್ತು ತಿಂಗಳುಗಳಲ್ಲಿ ತಾಯಾಗುವವಳ ದೇಹದಲ್ಲಿ ಹಲವಾರು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ನಡೆಯುತ್ತವೆ. ಆದರೆ ಈ ಸುವರ್ಣ ದಿನಗಳಲ್ಲಿ ಬಹುತೇಕ ಗರ್ಭಿಣಿಯರನ್ನು ಕಾಡುವ ಒಂದು ದೊಡ್ಡ ಸಮಸ್ಯೆ ಎಂದರೆ ಅದು ‘ನಿದ್ರಾಹೀನತೆ’.
ಸುಮಾರು ಶೇ. 75 ಕ್ಕಿಂತ ಹೆಚ್ಚು ಮಹಿಳೆಯರು ಗರ್ಭಧಾರಣೆಯ ಅವಧಿಯಲ್ಲಿ ತೀವ್ರ ನಿದ್ರೆಯ ಕೊರತೆಯನ್ನು ಎದುರಿಸುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ. ಹಾಗಾದರೆ ಗರ್ಭಾವಸ್ಥೆಯಲ್ಲಿ ಈ ನಿದ್ರಾಹೀನತೆ ಕಾಡಲು ನಿಜವಾದ ಕಾರಣಗಳೇನು ಮತ್ತು ಇದನ್ನು ನಿವಾರಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯೋಣ.
ಗರ್ಭಾವಸ್ಥೆಯಲ್ಲಿ ನಿದ್ರೆಹೀನತೆ ಕಾಡುವುದು ಯಾಕೆ?
ಹಾರ್ಮೋನುಗಳ ದಿಢೀರ್ ಏರುಪೇರು
ಗರ್ಭಧಾರಣೆಯ ಆರಂಭದ ದಿನಗಳಲ್ಲಿ ದೇಹದಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ಮಟ್ಟವು ತೀವ್ರವಾಗಿ ಹೆಚ್ಚಾಗುತ್ತದೆ. ಈ ಹಾರ್ಮೋನ್ ಏರುಪೇರುಗಳು ಮಹಿಳೆಯರ ನೈಸರ್ಗಿಕ ನಿದ್ರೆಯ ಚಕ್ರವನ್ನು ಏರುಪೇರು ಮಾಡುತ್ತವೆ. ಇದರಿಂದಾಗಿ ಹಗಲಿನಲ್ಲಿ ಅತಿಯಾದ ಆಯಾಸ ಮತ್ತು ರಾತ್ರಿಯಲ್ಲಿ ನಿದ್ರೆ ಬಾರದಿರುವುದು ಸಂಭವಿಸುತ್ತದೆ.
ಆಗಾಗ್ಗೆ ಕಾಡುವ ಮೂತ್ರ ವಿಸರ್ಜನೆ
ಗರ್ಭದಲ್ಲಿ ಮಗು ಬೆಳೆದಂತೆಲ್ಲಾ ಕಿಬ್ಬೊಟ್ಟೆಯ ಭಾಗ ವಿಸ್ತರಣೆಯಾಗಿ, ಅದು ಮೂತ್ರಕೋಶದ ಮೇಲೆ ತೀವ್ರ ಒತ್ತಡವನ್ನು ಹೇರುತ್ತದೆ. ಇದರ ಪರಿಣಾಮವಾಗಿ ಗರ್ಭಿಣಿಯರು ರಾತ್ರಿ ಸಮಯದಲ್ಲಿ ಪದೇ ಪದೇ ಬಾತ್ರೂಮ್‌ಗೆ ಹೋಗಬೇಕಾಗಿ ಬರುತ್ತದೆ. ಈ ರೀತಿ ಪದೇ ಪದೇ ನಿದ್ರೆಗೆ ಭಂಗ ಬರುವುದರಿಂದ ಗಾಢ ನಿದ್ರೆ ಅಸಾಧ್ಯವಾಗುತ್ತದೆ.
ದೈಹಿಕ ಅಸ್ವಸ್ಥತೆ ಮತ್ತು ಎದೆಯುರಿ
ಮಗುವಿನ ತೂಕ ಹೆಚ್ಚಾಗುವುದರಿಂದ ಗರ್ಭಿಣಿಯರ ಬೆನ್ನಿನ ಮೂಳೆ ಮತ್ತು ಕೀಲುಗಳ ಮೇಲೆ ಒತ್ತಡ ಬಿದ್ದು ನೋವು ಕಾಣಿಸಿಕೊಳ್ಳುತ್ತದೆ. ಇದು ನೆಮ್ಮದಿಯಾಗಿ ಮಲಗಲು ಬಿಡುವುದಿಲ್ಲ. ಗರ್ಭಾವಸ್ಥೆಯ ಹಾರ್ಮೋನುಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಇದರಿಂದಾಗಿ ರಾತ್ರಿ ಮಲಗಿದಾಗ ಗಂಟಲಿಗೆ ಆಮ್ಲ ಬಂದಂತಾಗಿ ಎದೆಯುರಿ ಶುರುವಾಗಿ ನಿದ್ರೆ ಕೆಡುತ್ತದೆ.
ಇದನ್ನೂ ಓದಿ:
ಮಾನಸಿಕ ಒತ್ತಡ ಮತ್ತು ವಿಚಿತ್ರ ಕನಸುಗಳು
ಮೊದಲ ಬಾರಿ ತಾಯಿಯಾಗುವವರಲ್ಲಿ ಪ್ರಸವದ ಬಗ್ಗೆ ಇರುವ ಭಯ, ಮಗುವಿನ ಆರೋಗ್ಯದ ಚಿಂತೆ ಮತ್ತು ಮುಂಬರುವ ಜವಾಬ್ದಾರಿಗಳ ಆಲೋಚನೆಗಳು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಇದರೊಂದಿಗೆ, ಹಾರ್ಮೋನ್‌ಗಳ ಪ್ರಭಾವದಿಂದ ರಾತ್ರಿಯಲ್ಲಿ ವಿಚಿತ್ರ ಹಾಗೂ ಭಯಾನಕ ಕನಸುಗಳು ಬೀಳುತ್ತವೆ. ಇದರಿಂದ ಒಮ್ಮೆ ಎಚ್ಚರವಾದರೆ ಮತ್ತೆ ನಿದ್ರೆ ಹತ್ತುವುದು ಕಷ್ಟವಾಗುತ್ತದೆ.
ಗರ್ಭಿಣಿಯರು ಉತ್ತಮ ನಿದ್ರೆ ಪಡೆಯಲು ಸರಳ ಪರಿಹಾರಗಳು:
ಮಲಗುವಾಗ ನಿಮ್ಮ ಬೆನ್ನು, ಹೊಟ್ಟೆ ಮತ್ತು ಕಾಲುಗಳ ಭಾಗಕ್ಕೆ ಸರಿಯಾದ ಸಪೋರ್ಟ್ ನೀಡಲು ವಿಶೇಷವಾದ ಪ್ರೆಗ್ನೆನ್ಸಿ ಪಿಲ್ಲೋಗಳನ್ನು ಬಳಸಬೇಕು.
ಎದೆಯುರಿ ಮತ್ತು ಗ್ಯಾಸ್ ಸಮಸ್ಯೆ ತಡೆಯಲು ರಾತ್ರಿ ಮಲಗುವ ಕನಿಷ್ಠ 2 ಗಂಟೆ ಮುಂಚಿತವಾಗಿಯೇ ಹಗುರವಾದ ಊಟವನ್ನು ಮಾಡಬೇಕು.
ಮಲಗುವ ಮುನ್ನ ಮೊಬೈಲ್ ಫೋನ್ ನೋಡುವುದು ಅಥವಾ ಟಿವಿ ವೀಕ್ಷಿಸುವುದನ್ನು ಕಡ್ಡಾಯವಾಗಿ ತಪ್ಪಿಸಿ. ಬದಲಿಗೆ ಹಿತವಾದ ಸಂಗೀತ ಕೇಳಿ ಅಥವಾ ಪುಸ್ತಕ ಓದಬೇಕು.



