ಹೊಸದಿಗಂತ ವರದಿ ಚಿತ್ರದುರ್ಗ:
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಡೆಯುತ್ತಿರುವ ಹಿಂದೂ ಮಹಾಗಣಪತಿ ಉತ್ಸವದ ಅಂಗವಾಗಿ ಅ.3ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಬಾರಿ ರಾಜ್ಯದ ವಿವಿಧೆಡೆಯಿಂದ 6 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಶೋಭಾಯಾತ್ರೆಗೆ ನಗರದಾದ್ಯಂತ ಸಿದ್ಧತೆಗಳು ಅಂತಿಮ ಹಂತ ತಲುಪಿವೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ತಿಳಿಸಿದ್ದಾರೆ.
ನಗರದ ಹಿಂದೂ ಮಹಾಗಣಪತಿ ಸಭಾಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.14ರಿಂದ ನಡೆಯುತ್ತಿರುವ ಉತ್ಸವದ ಸಮಾರೋಪದ ಅಂಗವಾಗಿ ಶನಿವಾರ ಬೆಳಗ್ಗೆ 10 ಗಂಟೆಗೆ ವಿಶೇಷ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ್ ಮುಖ್ಯ ಭಾಷಣ ಮಾಡಲಿದ್ದಾರೆ. ನಗರದ ವಿವಿಧ ಮಠಾಧೀಶರು ಹಾಗೂ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಉತ್ಸವದ ಅಂಗವಾಗಿ ಈಗಾಗಲೇ ಬೃಹತ್ ಬೈಕ್ ರ‍್ಯಾಲಿ ನಡೆಸಲಾಗಿದ್ದು, ದುರ್ಗಾ ಹೋಮ, ನವಗ್ರಹ ಹೋಮ, ಗಣಪತಿ ಹೋಮ ಹಾಗೂ ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಅಲಂಕಾರ ಹಾಗೂ ದೀಪಾಲಂಕಾರ ಮಾಡಲಾಗುತ್ತಿದೆ.
ಇದನ್ನೂ ಓದಿ:
ಶೋಭಾಯಾತ್ರೆಯಲ್ಲಿ ತಮಟೆ, ನಾಸಿಕ್ ಡೋಲ್ ಸೇರಿದಂತೆ ವಿವಿಧ ವಾದ್ಯ ತಂಡಗಳು ಹಾಗೂ 6ರಿಂದ 8 ಕಲಾತಂಡಗಳು ಭಾಗವಹಿಸಲಿವೆ. ಗಾಂಧಿ ವೃತ್ತದಲ್ಲಿ ವಿಶೇಷ ಆರತಿ ಮತ್ತು ಕನಕ ವೃತ್ತದಲ್ಲಿ ಬೃಹತ್ ದೀಪಾರಾಧನೆ ನಡೆಯಲಿದೆ. ಮೆರವಣಿಗೆಯಲ್ಲಿ ನಿಯಮಾವಳಿಗಳಿಗೆ ಅನುಗುಣವಾಗಿ ಧ್ವನಿವರ್ಧಕಗಳನ್ನು ಬಳಸಲಾಗುವುದು ಎಂದು ಪ್ರಭಂಜನ್ ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅನ್ನಪ್ರಸಾದ ವಿತರಣೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಜಿ.ಆರ್. ಸುಧೀರ್ ಮಾತನಾಡಿ, ನಗರದ ಮದಕರಿ ವೃತ್ತ, ಕಾರು ಸ್ಟ್ಯಾಂಡ್, ಮಹಾವೀರ ಸರ್ಕಲ್, ಬರಗೇರಮ್ಮ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ಸೇರಿದಂತೆ ವಿವಿಧೆಡೆ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಶೋಭಾಯಾತ್ರೆ ಮತ್ತು ಭಕ್ತರ ಸಂಚಾರಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.



