September 24, 2026
Thursday, September 24, 2026
spot_img

ಜಾರ್ಖಂಡ್‌ ನಲ್ಲಿ ಭೀಕರ ಅಪಘಾತ: ಸಚಿವೆಯ ಪುತ್ರಿ ಸೇರಿ ನಾಲ್ವರ ದಾರುಣ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಷಾ ಸಿಂಗ್ ಸೇರಿದಂತೆ ನಾಲ್ವರು ಮೃತಪಟ್ಟಿ ಘಟನೆ ಇಂದು ಮುಂಜಾನೆ ನಡೆದಿದೆ.

ವೇಗವಾಗಿ ಬಂದ ಕಾರು ರಸ್ತೆಯ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ತ್ರಿಷಾ ಸಿಂಗ್, ಸಾರ್ಥಕ್ ಅಗರ್ವಾಲ್, ನಮನ ಗುಪ್ತಾ ಹಾಗೂ ವಂಶಿಕಾ ಖಂಡೇಲ್‌ವಾಲ್ ಎಂದು ಗುರುತಿಸಲಾಗಿದೆ.

ಅಪಘಾತದ ತೀವ್ರತೆಗೆ ಕಾರು ಟ್ರಕ್‌ನ ಹಿಂಭಾಗದ ಕೆಳಗೆ ಸಿಲುಕಿಕೊಂಡಿದ್ದು, ಅದರಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಗ್ಯಾಸ್ ಕಟರ್ ಬಳಸಿ ವಾಹನವನ್ನು ಕತ್ತರಿಸಬೇಕಾಯಿತು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂಜಿಎಂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ:

ಪೊಲೀಸರ ಪ್ರಕಾರ, ಅಪಘಾತ ಸಂಭವಿಸಿದ ವೇಳೆ ಟ್ರಕ್ ನಾಲ್ಕು ಪಥದ ರಸ್ತೆಯ ಬಲಭಾಗದಲ್ಲಿ ಡಿವೈಡರ್ ಸಮೀಪ ನಿಂತಿತ್ತು. ಟ್ರಕ್ ಕೆಟ್ಟುಹೋಗಿದ್ದರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಹಿಂಭಾಗದಲ್ಲಿ ವಾಹನದ ಅಪಾಯದ ಸೂಚನೆ ನೀಡಲು ಸಣ್ಣ ಮರದ ಕೊಂಬೆಯೊಂದನ್ನು ಇರಿಸಲಾಗಿತ್ತು ಎನ್ನಲಾಗಿದ್ದು, ಯಾವುದೇ ರಿಫ್ಲೆಕ್ಟರ್ ಅಥವಾ ಸ್ಪಷ್ಟ ಎಚ್ಚರಿಕೆ ಫಲಕಗಳು ಕಾಣಿಸಿರಲಿಲ್ಲ ಎನ್ನಲಾಗಿದೆ.

ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಹಾಗೂ ಮುಖ್ಯಮಂತ್ರಿ ಹೇಮಂತ್ ಸೊರೇನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಚಿವೆಯ ಪುತ್ರಿಯನ್ನು ಕಳೆದುಕೊಂಡ ಕುಟುಂಬದ ನೋವು ಅಪಾರವಾಗಿದ್ದು, ಈ ದುಃಖದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ ತಮ್ಮ ಸಂತಾಪ ಮತ್ತು ಬೆಂಬಲ ಇರುವುದಾಗಿ ಅವರು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಚಂಪೈ ಸೊರೇನ್ ಕೂಡ ತ್ರಿಷಾ ಸಿಂಗ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಪಘಾತದ ನಿಖರ ಕಾರಣ ಮತ್ತು ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Must Read