November 9, 2026
Monday, November 9, 2026
spot_img

ಸೇಡನ್ ಪಾರ್ಕ್ ಕದನಕ್ಕೆ ಸಜ್ಜಾದ ಟೀಮ್ ಇಂಡಿಯಾ: ಆಡುವ ಬಳಗದಲ್ಲಿ ಸಿರಾಜ್ ಎಂಟ್ರಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ರೋಚಕ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯವು ನಾಳೆ ಹ್ಯಾಮಿಲ್ಟನ್‌ನ ಪ್ರಸಿದ್ಧ ಸೇಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಆಡುವ ಬಳಗದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಆರಂಭಿಕ ಎರಡು ಏಕದಿನ ಪಂದ್ಯಗಳಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಆಡಿರಲಿಲ್ಲ. ಇದೀಗ ಭಾರತ ‘ಎ’ ತಂಡದ ಪರ ಕೆಂಪು ಚೆಂಡಿನ ಕ್ರಿಕೆಟ್ ಕರ್ತವ್ಯವನ್ನು ಯಶಸ್ವಿಯಾಗಿ ಮುಗಿಸಿರುವ ಸಿರಾಜ್, ನೇರವಾಗಿ ಮುಖ್ಯ ತಂಡವನ್ನು ಕೂಡಿಕೊಂಡಿದ್ದಾರೆ. ಹೀಗಾಗಿ ಅನುಭವಿ ವೇಗಿ ಸಿರಾಜ್ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಮಾಡಿಕೊಡಲು, ಜಮ್ಮು-ಕಾಶ್ಮೀರದ ಯುವ ವೇಗಿ ಆಖಿಬ್ ನಬಿ ಅವರನ್ನು ಹೊರಗಿಡುವ ಸಾಧ್ಯತೆಯಿದೆ. ಈ ಒಂದೇ ಒಂದು ಬದಲಾವಣೆಯೊಂದಿಗೆ ಟೀಮ್ ಇಂಡಿಯಾ ಕಿವೀಸ್ ಪಡೆಗೆ ಸೆಂಟಾಡ್ ನೀಡಲು ಕಣಕ್ಕಿಳಿಯಲಿದೆ.

ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗವು ಎಂದಿನಂತೆ ಅತ್ಯಂತ ಬಲಿಷ್ಠವಾಗಿದೆ. ತಂಡದ ಪರ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ನಾಯಕ ಶುಭ್‌ಮನ್ ಗಿಲ್ ಹಾಗೂ ಅನುಭವಿ ರೋಹಿತ್ ಶರ್ಮಾ ಹೊರಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ನಾಲ್ಕನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸಲಿದ್ದರೆ, ವಿಕೆಟ್ ಕೀಪರ್ ಬ್ಯಾಟರ್ ಜವಾಬ್ದಾರಿಯೊಂದಿಗೆ ಕೆ.ಎಲ್. ರಾಹುಲ್ ಐದನೇ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಆಲ್‌ರೌಂಡರ್‌ಗಳಾಗಿ ನಮನ್ ಧೀರ್ ಹಾಗೂ ಅಕ್ಷರ್ ಪಟೇಲ್ ತಂಡಕ್ಕೆ ಬಲ ತುಂಬಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಪುನರಾಗಮನದೊಂದಿಗೆ, ಅನ್ಶುಲ್ ಕಂಬೋಜ್, ಅರ್ಷ್‌ದೀಪ್ ಸಿಂಗ್ ಮತ್ತು ಗುರ್ನೂರ್ ಬ್ರಾರ್ ಅವರು ಕಿವೀಸ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕಲು ಸಜ್ಜಾಗಿದ್ದಾರೆ. ಒಟ್ಟಿನಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆಯಲಿರುವ ಈ ಪಂದ್ಯವು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುವುದು ಖಚಿತ.

Must Read

Skip to toolbar