October 2, 2026
Friday, October 2, 2026
spot_img

ದೆಹಲಿಯಲ್ಲಿ ಹೈಡ್ರಾಮಾ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಿಳಿದ ಆಪ್ ನಾಯಕ ಸೌರಭ್ ಭಾರದ್ವಾಜ್ ಪೊಲೀಸ್ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ಪ್ರತಿಭಟನೆಯ ಕಾವು ಜೋರಾಗಿದ್ದು, ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ದೆಹಲಿ ಪೊಲೀಸರ ಕಟ್ಟುನಿಟ್ಟಿನ ನಿಷೇಧಾಜ್ಞೆ ಮತ್ತು ಬಿಗಿ ಭದ್ರತೆಯ ನಡುವೆಯೂ ಜಂತರ್ ಮಂತರ್ ತಲುಪಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆಮ್ ಆದ್ಮಿ ಪಕ್ಷದ (AAP) ದೆಹಲಿ ಘಟಕದ ಅಧ್ಯಕ್ಷ ಹಾಗೂ ಸಚಿವ ಸೌರಭ್ ಭಾರದ್ವಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅವರೊಂದಿಗೆ ಆಪ್ ಶಾಸಕ ಸಂಜೀವ್ ಝಾ ಅವರನ್ನೂ ಸಹ ಪೊಲೀಸರು ಬಂಧಿಸಿದ್ದು, ಇದು ಆಪ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸರ ಕಣ್ಣು ತಪ್ಪಿಸಿ ಜಂತರ್ ಮಂತರ್ ತಲುಪಿದೆ

ತಮ್ಮ ಬಂಧನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸೌರಭ್ ಭಾರದ್ವಾಜ್, ನನ್ನನ್ನು ಪ್ರತಿಭಟನೆಗೆ ಹೋಗದಂತೆ ತಡೆಯಲು ಇಡೀ ರಾತ್ರಿ ಎಸ್‌ಎಚ್‌ಒ ಸೇರಿದಂತೆ ಪೊಲೀಸ್ ಪಡೆ ನನ್ನ ಮನೆಯ ಹೊರಗೆ ಕಾವಲು ಕಾಯುತ್ತಿತ್ತು. ಆದರೆ ನಾನು ಪೊಲೀಸರ ಕಣ್ಣು ತಪ್ಪಿಸಿ, ಯಾವುದೇ ಕಾರು ಅಥವಾ ಬೆಂಗಾವಲು ವಾಹನವಿಲ್ಲದೆ ಒಂಟಿಯಾಗಿ ಹೊರಟೆ. ಮೆಟ್ರೋ ರೈಲು ಹತ್ತಿ, ಅಲ್ಲಿಂದ ಆಟೋ  ಮೂಲಕ ಜಂತರ್ ಮಂತರ್ ತಲುಪಿದ್ದೇನೆ ಎಂದು ವಿವರಿಸಿದರು. ಅಲ್ಲದೆ, ಮೆಟ್ರೋ ನಿಲ್ದಾಣಗಳು ಬಂದ್ ಆಗಿದ್ದರೂ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಯುವ ಪೀಳಿಗೆ ಹಾಗೂ ಸಾರ್ವಜನಿಕರು ಯಾವುದೇ ಹಾದಿಯಲ್ಲಾದರೂ ಜಂತರ್ ಮಂತರ್ ತಲುಪಿ ಶಾಂತಿಯುತ ಹೋರಾಟ ಮುಂದುವರಿಸಬೇಕು ಎಂದು ಕರೆ ನೀಡಿದರು.

ಪೊಲೀಸರಿಂದ ಮಹಿಳಾ ಕಾರ್ಯಕರ್ತರ ಮೇಲೆ ದೌರ್ಜನ್ಯ?

ಪೊಲೀಸರು ತಮ್ಮನ್ನು ಬಲವಂತವಾಗಿ ಎಳೆದೊಯ್ಯುವಾಗ ಗಂಭೀರ ಆರೋಪ ಮಾಡಿದ ಸೌರಭ್, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ವಾಲಂಟಿಯರ್‌ಗಳ ಜೊತೆ ಪುರುಷ ಪೊಲೀಸರು ಅಸಭ್ಯವಾಗಿ ನಡೆದುಕೊಂಡಿದ್ದಾರೆ ಮತ್ತು ತಳ್ಳಾಡಿದ್ದಾರೆ ಎಂದು ದೂರಿದರು. ತಳ್ಳಾಟದ ವೇಳೆ ತಮಗೂ ಗಾಯಗಳಾಗಿದ್ದು, ಪೊಲೀಸರು ಕೈಯಿಂದ ಗೀರಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ಗಾಯದ ಗುರುತುಗಳನ್ನು ತೋರಿಸಿದರು. ʼಇದು ಕೇಂದ್ರ ಸರ್ಕಾರದ ದಬ್ಬಾಳಿಕೆಯ ಸಂಕೇತ. ಸರ್ಕಾರ ಏನು ಹೇಳುತ್ತದೋ ಅದನ್ನೇ ಪೊಲೀಸರು ಮಾಡುತ್ತಿದ್ದಾರೆ. ಆದರೆ ನಮ್ಮ ಈ ಸಾಂವಿಧಾನಿಕ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಭಾರದ್ವಾಜ್ ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ಜಂತರ್ ಮಂತರ್ ಸುತ್ತಮುತ್ತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಇದನ್ನೂ ಓದಿ:

ಘಟನೆಯ ಹಿನ್ನೆಲೆ

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜಂಟಿ ಪ್ರತಿಭಟನೆಗೆ ದೆಹಲಿ ಪೊಲೀಸರು ನಿಷೇಧ ಹೇರಿದ್ದು, ಮುಂಜಾಗ್ರತಾ ಕ್ರಮವಾಗಿ ಇಡೀ ಸೆಂಟ್ರಲ್ ದೆಹಲಿ ಭಾಗದಲ್ಲಿ ಭದ್ರತೆಯನ್ನು ತೀವ್ರಗೊಳಿಸಿ ಸೆಕ್ಷನ್ 163 ಅನ್ನು ಜಾರಿಗೊಳಿಸಿದ್ದಾರೆ. ಪ್ರತಿಭಟನಾಕಾರರು ಗುಂಪು ಸೇರುವುದನ್ನು ತಡೆಯಲು ರಾಜೀವ್ ಚೌಕ್, ಪಟೇಲ್ ಚೌಕ್ ಸೇರಿದಂತೆ ರಾಜಧಾನಿಯ 11 ಪ್ರಮುಖ ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು.

Must Read