ಹೊಸದಿಗಂತ ವರದಿ ಚಿತ್ರದುರ್ಗ
ರೈತ ಸಮುದಾಯಕ್ಕೆ ಕೃಷಿ ಮಾಡಲು ಅಗತ್ಯ ನೀರು ಪೂರೈಸಿದಲ್ಲಿ ಅವರು ದೇಶಕ್ಕೆ ಅನ್ನ ನೀಡುತ್ತಾರೆ. ಈ ನಿಟ್ಟಿನಲ್ಲಿ ಬರದನಾಡಿಗೆ ಭದ್ರಾ ನೀರು ಹರಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಬಂದಿರುವ ಹಿನ್ನೆಲೆಯಲ್ಲಿ ನಗರದ ಹೊರವಲಯದ ದಾವಣಗೆರೆ ರಸ್ತೆಯ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತ ದೇಶದ ಬೆನ್ನಲುಬು ಎಂದು ಹೇಳಿದರೆ ಸಾಲದು. ರೈತರು ಕೃಷಿ ಮಾಡಲು ಅಗತ್ಯ ಸೌಕರ್ಯಗಳನ್ನು ನೀಡಬೇಕು. ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯ ನೆರವು ನೀಡಲು ನಮ್ಮ ಸರ್ಕಾರ ಬದ್ದ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯ ಜಿಲ್ಲೆಯ ಬಹುದಿನಗಳ ಕನಸು. ಇದಕ್ಕಾಗಿ ಸುದೀರ್ಘ ಹೋರಾಟ ನಡೆದಿದೆ. ಹೋರಾಟದ ಫಲವಾಗಿ ಇಂದು ನೀರು ಬರುವ ಮೂಲಕ ನನಸಾದಂತಾಗಿದೆ. ಎಸ್‌ಎಂ.ಕೃಷ್ಣ ಅವರ ಕಾಲದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅಗತ್ಯ ಅನುದಾನ ನೀಡುವ ಮೂಲಕ ಮುನ್ನುಡಿ ಬರೆದರು. ನಾನು ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿ ಯೋಜನೆ ಜಾರಿಗೆ ಸಾಕಷ್ಟು ಶ್ರಮಿಸಿದ್ದೇನೆ. ಅದರಿಂದಾಗಿ ಈಗ ಮುಖ್ಯಮಂತ್ರಿಯಾಗಿ ಬರದನಾಡಿಗೆ ನೀರು ಹರಿಸಿದ್ದೇನೆ ಎಂದು ಹೇಳಿದರು.
ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ
ನಾನು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಧಿವೇಶನ ಕರೆದಿದ್ದೇನೆ. ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಉದ್ದೇಶಿಸಿದ್ದೇನೆ. ಈ ನಿಟ್ಟಿನಲ್ಲಿ ಕಾಂಗ್ರೇಸ್ ರಾಜ್ಯದ ಜನರ ಹಿತ ಕಾಯಲಿದೆ. ನಾನು ಮುಂದೆಯೂ ಸಿಎಂ ಆಗುತ್ತೇನೆ. ಆಗ ಭದ್ರಾ ಮೇಲ್ದಂಡೆ ಉಳಿದ ಕಾಮಗಾರಿ ಪೂರ್ಣಗೊಳಿಸುವ ಮೂಲಕ ನನ್ನ ಆಪ್ತಮಿತ್ರ ಡಿ.ಸುಧಾಕರ್ ಅವರ ಕನಸನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕಳೆದ 40 ವರ್ಷಗಳ ಹಿಂದೆ ಬರದ ಜಿಲ್ಲೆಗೆ ನೀರು ಹರಿಸುವಂತೆ ರಾಮಕೃಷ್ಣ ಹೆಗಡೆ ಅವರಿಗೆ ಎಸ್.ನಿಜಲಿಂಗಪ್ಪ ಮನವಿ ಮಾಡಿದ್ದರಂತೆ. ಈಗ ಜಿಲ್ಲೆಗೆ ಭದ್ರಾ ನೀರು ಬಂದಿದ್ದು, ಎಸ್‌ಎನ್ ಅವರ ಕನಸು ನನಸಾದಂತಾಗಿದೆ. ಕಾಂಗ್ರೇಸ್ ಸರ್ಕಾರ ಸಂಕಲ್ಪ ಮಾಡಿ ಜಿಲ್ಲೆಗೆ ನೀರು ತಂದಿದೆ. ಮುಂದಿನನ ದಿನಗಳಲ್ಲಿ ತುಂಗಾ ನದಿಯಿಂದ ೧೭ ಟಿ.ಎಂಸಿ ನೀರು ಲಿಫ್ಟ್ ಮಾಡುವ ಮೂಲಕ ಉಳಿದ ನೀರನ್ನು ಜಿಲ್ಲೆಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ:
ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೇಸ್ ಪಕ್ಷದ ಸಂಕಲ್ಪದಿಂದ ಇಂದು ಜಿಲ್ಲೆಗೆ ಭದ್ರಾ ನೀರು ಬಂದಿದೆ. 2002 ರಲ್ಲಿ ಎಸ್.ಎಂ.ಕೃಷ್ಣ ಅಗತ್ಯ ಅನುದಾನ ಯೋಜನೆಗೆ ಮುನ್ನುಡಿ ಬರೆದರು. ಕಾಂಗ್ರೇಸ್ ಸರ್ಕಾರ ಸೇರಿದಂತೆ ಆಯಾ ಕಾಲದ ಸರ್ಕಾರಗಳು ಸಹ ಯೋಜನೆಗೆ ಶ್ರಮಿಸಿವೆ. ಯೋಜನೆಗೆ ಒಟ್ಟು 21,500 ಕೋಟಿ ಅಗತ್ಯವಿದ್ದು, ಈವರೆಗೆ 12,500ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆ ಪೂರ್ಣಗೊಂಡಲ್ಲಿ ಬಯಲುಸೀಮೆ ಜನರ ಬದುಕು ಹಸನಾಗಲಿದೆ ಎಂದರು.
ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿದರು. ಸಮಾಜ ಕಲ್ಯಾಣ ಸಚಿವ ಹೆಚ್.ಮುನಿಯಪ್ಪ, ಸಚಿವ ಬಸವಂತಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಹೆಚ್.ಆಂಜನೇಯ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ, ನೀರಾವರಿ ಹೋರಾಟ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಸುಹಾಸ್ ಸುಧಾಕರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



