ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ಲೈದುಬೈ ವಿಮಾನದ ಕಾಕ್ಪಿಟ್ನಲ್ಲಿ ಸಹ-ಪೈಲಟ್ ನಡೆಸಿದ ಹತ್ಯಾಪ್ರಯತ್ನವನ್ನು ಒಂಟಿಯಾಗಿ ಎದುರಿಸಿ, 180 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಶೀಘ್ರ ಚೇತರಿಕೆಗಾಗಿ ದೇಶದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಮಹಾಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.
ದುಬೈನಿಂದ ಟೆಲ್ ಅವಿವ್ಗೆ ಹಾರುತ್ತಿದ್ದ ‘ಫ್ಲೈದುಬೈ FZ1073’ ವಿಮಾನದ ಮಧ್ಯ ಆಕಾಶದಲ್ಲಿ ಈ ರೋಮಾಂಚನಕಾರಿ ಘಟನೆ ನಡೆದಿದೆ. ಸಹ-ಪೈಲಟ್ ಕತ್ತಿಯಿಂದ ಇರಿದು ಇವರನ್ನು ಹತ್ಯೆ ಮಾಡಲು ಮತ್ತು ವಿಮಾನವನ್ನು ತನ್ನ ಹತೋಟಿಗೆ ಪಡೆಯಲು ಯತ್ನಿಸಿದ್ದಾನೆ. ಆದರೆ ತೀವ್ರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಸ್ಮಿತ್, ಕಾಕ್ಪಿಟ್ ಬಾಗಿಲನ್ನು ತೆಗೆದು ಇತರ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಬರುವಂತೆ ಮಾಡಿದರು. ಇದರಿಂದಾಗಿ ವಿಮಾನವು ಸೌದಿ ಅರೇಬಿಯಾದ ತಬೂಕ್ನಲ್ಲಿ ಸುರಕ್ಷಿತವಾಗಿ ಇಳಿಯಿತು. ಪ್ರಸ್ತುತ ಸ್ಮಿತ್ ಅವರು ತಬೂಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮನಾಥ ಜ್ಯೋತಿರ್ಲಿಂಗ ಕ್ಷೇತ್ರದಲ್ಲಿ ಮಹಾಮೃತ್ಯುಂಜಯ ಜಪ
ಗುಜರಾತ್ನ ಪ್ರಸಿದ್ಧ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಕ್ಯಾಪ್ಟನ್ ಸ್ಮಿತ್ ಅವರ ದೀರ್ಘಾಯುಷ್ಯಕ್ಕಾಗಿ ವಿಶೇಷ ಮಹಾಪೂಜೆ ಹಮ್ಮಿಕೊಳ್ಳಲಾಗಿದೆ. ದೇಶದ ಹೆಮ್ಮೆಯ ಪೈಲಟ್ ಕಣ್ಣೆದುರಿದ್ದ ಪಿತೂರಿಯನ್ನು ಮೆಟ್ಟಿ ನಿಂತಿದ್ದಾರೆ ಎಂದು ಶ್ಲಾಘಿಸಿರುವ ದೇವಸ್ಥಾನದ ಟ್ರಸ್ಟ್, ಅವರಿಗಾಗಿ ‘ಮಹಾಮೃತ್ಯುಂಜಯ ಮಂತ್ರ ಜಪ ಅನುಷ್ಠಾನ’ವನ್ನು ಆರಂಭಿಸಿದೆ ಎಂದು ತಿಳಿಸಿದೆ.
ಕಾಶಿ ವಿಶ್ವನಾಥ ಧಾಮದಲ್ಲಿ 1 ಲಕ್ಷ ಮಂತ್ರ ಪಠಣ
ವಾರಣಾಸಿಯ ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ ಅವರ ಸಾಹಸಕ್ಕೆ ಗೌರವ ಸಲ್ಲಿಸಲು ಮತ್ತು ಶೀಘ್ರ ಗುಣಮುಖರಾಗಲು 11 ಜನ ವಿದ್ವಾಂಸರು ಸೇರಿ 1,00,000 ಮಹಾಮೃತ್ಯುಂಜಯ ಮಂತ್ರಗಳ ಜಪ ಮಾಡುತ್ತಿದ್ದಾರೆ. ಜೊತೆಗೆ 21 ಜನ ಪಂಡಿತರು ಕುಶೋದಕದಿಂದ ವಿಶೇಷ ರುದ್ರಾಭಿಷೇಕ ನೆರವೇರಿಸುತ್ತಿದ್ದಾರೆ. ಕಾಶಿಯ ಪಾತಾಲಪುರಿ ಮಠದಲ್ಲಿ ಹನುಮಾನ್ ಚಾಲೀಸಾ ಪಠಣವನ್ನೂ ಮಾಡಲಾಗಿದೆ.
ಗಂಗಾ ಆರತಿಯಲ್ಲಿ ವಿಶೇಷ ಪ್ರಾರ್ಥನೆ
ನಮೋ ಘಾಟ್ ಹಾಗೂ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಘಾಟ್ಗಳಲ್ಲಿ ಸಂಜೆ ನಡೆಯುವ ವಿಶ್ವಪ್ರಸಿದ್ಧ ಗಂಗಾ ಆರತಿಯ ವೇಳೆಯೂ ವಿಶೇಷ ಪ್ರಾರ್ಥನೆಗಳನ್ನು ಸಮರ್ಪಿಸಲು ಸಿದ್ಧತೆ ನಡೆಸಲಾಗಿದೆ. ಇದು ಕೇವಲ ಪ್ರಾರ್ಥನೆಯಷ್ಟೇ ಅಲ್ಲದೆ ‘ವಸುಧೈವ ಕುಟುಂಬಕಂ’ ಭಾವನೆಯಡಿ ಮಾನವೀಯತೆಗೆ ಅವರು ಸಲ್ಲಿಸಿದ ಸೇವೆಗೆ ದೇಶ ಸಲ್ಲಿಸುತ್ತಿರುವ ಗೌರವವಾಗಿದೆ.
ಇದನ್ನೂ ಓದಿ:
ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಅದ್ಭುತ ಶೌರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ʼಕ್ಯಾಪ್ಟನ್ ಸ್ಮಿತ್ ಜಗತ್ತಿಗೆ ಧೀರತನದ ಪರಮೋಚ್ಚ ಉದಾಹರಣೆ ನೀಡಿದ್ದಾರೆ. ಸ್ವಂತ ಜೀವದ ಹಂಗು ತೊರೆದು ಪ್ರಯಾಣಿಕರ ಜೀವ ಉಳಿಸಿದ್ದಾರೆ. 140 ಕೋಟಿ ಭಾರತೀಯರು ಅವರಿಗೆ ಸಲಾಂ ಮಾಡುತ್ತಾ, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆʼ ಎಂದು ಮೋದಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.



