June 19, 2026
Friday, June 19, 2026
spot_img

ಲಕ್ಷದ್ವೀಪದತ್ತ ಭಾರತದ ಮೊದಲ ಸೀ-ಪ್ಲೇನ್: ಕಾಕ್‌ಪಿಟ್‌ನಲ್ಲಿ ವೆಲ್ ಕಮ್ ಹೇಳಲಿದ್ದಾರೆ ಮಲಯಾಳಿ ಪೈಲಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕೊಚ್ಚಿಯಿಂದ ಲಕ್ಷದ್ವೀಪದತ್ತ ದೇಶದ ಮೊದಲ ನಿಯಮಿತ ಸೀ-ಪ್ಲೇನ್ ಸೇವೆ ಆರಂಭಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಈ ವಿಶೇಷ ವಿಮಾನವನ್ನು ಹಾರಿಸಲಿರುವ ಪೈಲಟ್ ಅರುಣ್ ಗೋಪ್ ಈಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರೆ.


ನೀರಿನ ಮೇಲೂ ಹಾಗೂ ಸಾಮಾನ್ಯ ರನ್‌ವೇ ಮೇಲೂ ಇಳಿಯಬಲ್ಲ ಆಂಫಿಬಿಯನ್ ವಿಮಾನ ಹಾರಾಟದಲ್ಲಿ ಪರಿಣತಿ ಹೊಂದಿರುವ ಅರುಣ್ ಗೋಪ್, ಕೇರಳದ ಕೋಟಾಯಂ ಜಿಲ್ಲೆಯ ಮೂಲದವರು. ತಮ್ಮ ಹಲವು ವರ್ಷಗಳ ಅನುಭವದೊಂದಿಗೆ ಅರುಣ್ ದೇಶದ ಗಮನ ಸೆಳೆದಿದ್ದಾರೆ.


ಸೀ-ಪ್ಲೇನ್ ವಿಶೇಷತೆ ಏನು ?


ಸೀ-ಪ್ಲೇನ್ ಕೇವಲ ವಿಮಾನ ನಿಲ್ದಾಣದಲ್ಲಷ್ಟೇ ಅಲ್ಲ, ಸಮುದ್ರ, ಸರೋವರ ಅಥವಾ ನೀರಿನ ಮೇಲೂ ಇಳಿಯಬಲ್ಲ ವಿಶೇಷ ವಿಮಾನ. ಲಕ್ಷದ್ವೀಪದಂತಹ ದ್ವೀಪ ಪ್ರದೇಶಗಳಿಗೆ ವೇಗವಾಗಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗುತ್ತಿದೆ. ಈ ಯೋಜನೆಗೆ ಬಳಸಲಾಗುತ್ತಿರುವ Viking DHC-6-400 Twin Otter ವಿಮಾನವು ನೀರು ಮತ್ತು ನೆಲ ಎರಡರ ಮೇಲೂ ಸುರಕ್ಷಿತವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸುಮಾರು 20 ಪ್ರಯಾಣಿಕರನ್ನು ಹೊತ್ತೊಯ್ಯುವ ಈ ವಿಮಾನವು ದ್ವೀಪಗಳ ನಡುವಿನ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದೆ.


ಪೈಲಟ್ ಅರುಣ್ ಗೋಪ್ ಅವರಿಗೆ ಸಾವಿರಾರು ಗಂಟೆಗಳ ಹಾರಾಟದ ಅನುಭವವಿದ್ದು, ಅವರು ಆಂಫಿಬಿಯನ್ ವಿಮಾನ ಹಾರಾಟದ ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ. ಭಾರತದಲ್ಲಿ ಸೀ-ಪ್ಲೇನ್ ಸೇವೆಗಳು ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಇಂತಹ ವಿಶೇಷ ಅರ್ಹತೆ ಹೊಂದಿರುವ ಪೈಲಟ್‌ಗಳ ಸಂಖ್ಯೆ ಅತ್ಯಂತ ಕಡಿಮೆ. ಇದೇ ಕಾರಣಕ್ಕೆ ಕೊಚ್ಚಿ–ಲಕ್ಷದ್ವೀಪ ಯೋಜನೆಯಲ್ಲಿ ಅವರ ಪಾತ್ರ ಮಹತ್ವ ಪಡೆದಿದೆ. ಪ್ರಯೋಗಾತ್ಮಕ ಹಾರಾಟಗಳಲ್ಲಿಯೂ ಅವರು ಭಾಗವಹಿಸಿದ್ದು, ಯೋಜನೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


ಲಕ್ಷದ್ವೀಪದ ಅನೇಕ ದ್ವೀಪಗಳಿಗೆ ತಲುಪಲು ಈಗಲೂ ಹಡಗು ಅಥವಾ ಸೀಮಿತ ವಿಮಾನ ಸೇವೆಗಳನ್ನೇ ಅವಲಂಬಿಸಬೇಕಾಗಿದೆ. ಸೀ-ಪ್ಲೇನ್ ಸೇವೆ ಆರಂಭವಾದರೆ ಪ್ರವಾಸಿಗರು ಕಡಿಮೆ ಸಮಯದಲ್ಲಿ ದ್ವೀಪಗಳಿಗೆ ತಲುಪಬಹುದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !