July 27, 2026
Monday, July 27, 2026
spot_img

ಶ್ರೀಲಂಕಾ ಬಳಿ ಇರಾನ್ ಹಡಗಿನ ಮೇಲೆ ದಾಳಿ: 108 ಮಂದಿ ನಾಪತ್ತೆ, 78 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾದ ಗ್ಯಾಲೆ ಕರಾವಳಿಯಲ್ಲಿ ಇರಾನ್‌ ದೇಶಕ್ಕೆ ಸಂಬಂಧಿಸಿದ ನೌಕೆಯ ಮೇಲೆ ಜಲಾಂತರ್ಗಾಮಿ ದಾಳಿ ನಡೆದಿದೆ. ಕನಿಷ್ಠ 108 ಜನರು ನಾಪತ್ತೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ .

ಶ್ರೀಲಂಕಾದ ದಕ್ಷಿಣ ಸಮುದ್ರ ತೀರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಇರಾನ್‌ನ ‘ಐರಿಸ್ ದೇನಾ’ ಯುದ್ಧನೌಕೆಯಲ್ಲಿದ್ದ ಕನಿಷ್ಠ 30 ನಾವಿಕರನ್ನು ಶ್ರೀಲಂಕಾ ರಕ್ಷಣಾ ಪಡೆಗಳು ಬುಧವಾರ ಮುಂಜಾನೆ ರಕ್ಷಿಸಿವೆ ಎಂದು ವಿದೇಶಾಂಗ ಸಚಿವ ವಿಜಿತ ಹೇರತ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಇಂದು ಮುಂಜಾನೆ 5.08ಕ್ಕೆ ದಕ್ಷಿಣದ ಗಾಲೆ ಬಂದರು ಜಿಲ್ಲೆಯಿಂದ ಸುಮಾರು 40 ನಾಟಿಕಲ್ ಮೈಲಿ ದೂರದಲ್ಲಿ ‘ಐರಿಸ್ ದೇನಾ’ ಎಂಬ ಹಡಗು ಮುಳುಗುತ್ತಿರುವ ಬಗ್ಗೆ ಶ್ರೀಲಂಕಾ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಗೆ ಸಂದೇಶ ಬಂದಿತ್ತು. ಹಡಗಿನಲ್ಲಿ ಸುಮಾರು 180 ಸಿಬ್ಬಂದಿಗಳಿದ್ದರು ಎನ್ನಲಾಗಿದ್ದು, ಈ ಪೈಕಿ 30 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ ಎಂದು ವಿವರಿಸಿದರು.

ಯುದ್ಧನೌಕೆ ಮುಳುಗಲು ನಿಖರವಾದ ಕಾರಣವೇನೆಂಬುದು ಈವರೆಗೆ ತಿಳಿದುಬಂದಿಲ್ಲ.ಅಂತಾರಾಷ್ಟ್ರೀಯ ಕಡಲ ರಕ್ಷಣಾ ಸಮಾವೇಶದ ನಿಯಮಗಳ ಪ್ರಕಾರ, ಯಾವುದೇ ಕಾರಣವಿರಲಿ, ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದವರನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ರಕ್ಷಿಸಲಾದ ನಾವಿಕರನ್ನು ಗಾಲೆಯ ಕರಾಪಿಟಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನೌಕಾಪಡೆಯ ದಕ್ಷಿಣ ಕಮಾಂಡ್ ಸುತ್ತಮುತ್ತ ಭದ್ರತೆಯನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಸಂದರ್ಭ ಗಲ್ಫ್ ಪ್ರದೇಶದಲ್ಲಿ (ಪಶ್ಚಿಮ ಏಷ್ಯಾ) ನಡೆಯುತ್ತಿರುವ ಪ್ರಸ್ತುತ ಸಂಘರ್ಷದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಹೇರತ್, ಸಂಘರ್ಷವನ್ನು ಶಾಂತಿಯುತವಾಗಿ ಅಂತ್ಯಗೊಳಿಸುವಂತೆ ಶ್ರೀಲಂಕಾ ಪರವಾಗಿ ಮನವಿ ಮಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !