ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ನಡುವೆ ಬುಧವಾರವಷ್ಟೇ ಸಹಿಯಾಗಿದ್ದ ಐತಿಹಾಸಿಕ ಶಾಂತಿ ಒಪ್ಪಂದದ ಬೆನ್ನಲ್ಲೇ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಆವರಿಸಿದೆ. ಒಪ್ಪಂದದ ನಿಯಮಗಳನ್ನು ಗಾಳಿಗೆ ತೂರಿ ಇಸ್ರೇಲ್ ಪಡೆಗಳು ದಕ್ಷಿಣ ಲೆಬನಾನ್ ಮೇಲೆ ಭೀಕರ ವಾಯುದಾಳಿ ನಡೆಸಿದ ಬೆನ್ನಲ್ಲೇ, ಇರಾನ್ ತಕ್ಷಣದ ಕ್ರಮವಾಗಿ ವಿಶ್ವದ ಅತ್ಯಂತ ಸೂಕ್ಷ್ಮ ತೈಲ ಸಾಗಣೆ ಮಾರ್ಗವಾದ ‘ಹಾರ್ಮೊಜ್ ಜಲಸಂಧಿ’ಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಚ್ಚಿ ಆದೇಶ ಹೊರಡಿಸಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಡಲ ರೇಡಿಯೋ ಚಾನೆಲ್‌ಗಳ ಮೂಲಕ ಜಲಸಂಧಿಯ ಸಾಗಣೆಯನ್ನು ನಿಷೇಧಿಸಿ ಅಧಿಕೃತ ಎಚ್ಚರಿಕೆ ಸಂದೇಶ ರವಾನಿಸಿದೆ.
ಬಿಕ್ಕಟ್ಟಿಗೆ ತಕ್ಷಣದ ಕಾರಣಗಳೇನು?
ದಕ್ಷಿಣ ಲೆಬನಾನ್‌ನ 11 ಕ್ಕೂ ಹೆಚ್ಚು ಪಟ್ಟಣಗಳ ಮೇಲೆ ಇಸ್ರೇಲ್ ನಡೆಸಿದ ಸರಣಿ ವಾಯುದಾಳಿಗಳಲ್ಲಿ ಕನಿಷ್ಠ 18 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 33 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್ ಸೇನೆಯು ದಾಳಿ ಚುರುಕುಗೊಳಿಸಿದಾಗ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರರು ನಡೆಸಿದ ರೇಡಾರ್ ಮತ್ತು ಮಿಸೈಲ್ ದಾಳಿಯಲ್ಲಿ ಇಸ್ರೇಲ್‌ನ ನಾಲ್ಕು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಮೂರು ಮರ್ಕಾವಾ (Merkava) ಟ್ಯಾಂಕ್‌ಗಳು ಧ್ವಂಸಗೊಂಡಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮಗೆ ಅಮೆರಿಕ-ಇರಾನ್ ಒಪ್ಪಂದ ಅನ್ವಯಿಸುವುದಿಲ್ಲ ಎಂದಿದ್ದು, ಹೆಜ್ಬೊಲ್ಲಾ ಸಂಪೂರ್ಣ ನಿಗ್ರಹವಾಗುವವರೆಗೂ ಲೆಬನಾನ್‌ನಿಂದ ತಮ್ಮ ಸೇನೆ ಹಿಂಪಡೆಯುವುದಿಲ್ಲ ಎಂದು ಕಡಕ್ ಆಗಿ ಹೇಳಿದ್ದಾರೆ.
ಇರಾನ್‌ನಿಂದ ಹಾರ್ಮೊಜ್ ಜಲಸಂಧಿ ಬಂದ್: ಜಾಗತಿಕ ತಲ್ಲಣ
ಇಸ್ರೇಲ್‌ನ ದಾಳಿಗೆ ಅಮೆರಿಕದ ಪ್ರೇರೇಪಣೆಯೇ ಕಾರಣ ಎಂದು ಆರೋಪಿಸಿರುವ ಇರಾನ್ ನೌಕಾಪಡೆ, ಯುಎಸ್ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ದೂರಿದೆ. ಹಾರ್ಮೊಜ್ ಜಲಸಂಧಿಯ ಮೂಲಕ ಯಾವುದೇ ದೇಶದ ವಾಣಿಜ್ಯ ಅಥವಾ ತೈಲ ಟ್ಯಾಂಕರ್ ಹಡಗುಗಳು ಸಂಚರಿಸುವಂತಿಲ್ಲ. ನಿಯಮ ಮೀರಿ ಬರುವ ಹಡಗುಗಳ ಮೇಲೆ ನೇರ ದಾಳಿ ನಡೆಸಲಾಗುವುದು ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಸಿದ್ದಾರೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇಂದು ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಖಾಯಂ ಶಾಂತಿ ಒಪ್ಪಂದದ ತಾಂತ್ರಿಕ ಮಟ್ಟದ ಮಾತುಕತೆಯಿಂದ ಇರಾನ್ ತನ್ನ ನಿಯೋಗವನ್ನು ಹಿಂಪಡೆದಿದೆ.
ಇದನ್ನೂ ಓದಿ:
ಜಾಗತಿಕ ಮಾರುಕಟ್ಟೆ ಮತ್ತು ಭಾರತದ ಮೇಲಿನ ಪರಿಣಾಮ
ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು ಶೇಕಡಾ 20 ಕ್ಕೂ ಹೆಚ್ಚು ಭಾಗವು ಈ ಹಾರ್ಮೊಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ. ಇರಾನ್ ಈ ಮಾರ್ಗವನ್ನು ಮುಚ್ಚಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರವಾಗಿ ಏರಿಕೆಯಾಗುವ ಆತಂಕ ಎದುರಾಗಿದೆ. ಇದು ಭಾರತ ಸೇರಿದಂತೆ ಪ್ರಮುಖ ಏಷ್ಯಾದ ದೇಶಗಳಲ್ಲಿ ಇಂಧನ ಬಿಕ್ಕಟ್ಟು ಮತ್ತು ಪೆಟ್ರೋಲ್-ಡೀಸೆಲ್ ದರ ದುಬಾರಿಯಾಗಲು ಕಾರಣವಾಗಬಹುದು. ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ ಗ್ವಿರ್, “ಇಡೀ ಲೆಬನಾನ್ ಅನ್ನು ಸುಟ್ಟು ಬೂದಿ ಮಾಡಬೇಕು” ಎಂದು ಹೇಳಿಕೆ ನೀಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.



