ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ ‘ಜೈಲರ್ 2’ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಹಿಂದೆ ಜೂನ್ 12 ರಂದು ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ, ಇದೀಗ ಚಿತ್ರತಂಡವು ಚಿತ್ರದ ಒಳಿತಿಗಾಗಿ ಹಾಗೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಉದ್ದೇಶದಿಂದ ಬಿಡುಗಡೆಯನ್ನು ಸೆಪ್ಟೆಂಬರ್ ತಿಂಗಳಿಗೆ ಮುಂದೂಡಿದೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ನಡೆದ ದುರದೃಷ್ಟಕರ ಅವಘಡದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಘಟನೆಯ ಬೆನ್ನಲ್ಲೇ ಸಿನಿಮಾ ಮುಂದೂಡಿಕೆಯ ಸುದ್ದಿ ಹೊರಬಿದ್ದಿದ್ದು, ಹೊಸ ಪ್ಲಾನ್ ಪ್ರಕಾರ ‘ಜೈಲರ್ 2’ ಚಿತ್ರವು ಸೆಪ್ಟೆಂಬರ್ 11 ರಂದು ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ.
ಗಣೇಶ ಹಬ್ಬದ ರಜೆಯ ಮೇಲೆ ಕಣ್ಣಿಟ್ಟ ಚಿತ್ರತಂಡ
ಸೆಪ್ಟೆಂಬರ್ 14 ರ ಸೋಮವಾರದಂದು ಗಣೇಶ ಚತುರ್ಥಿ ಹಬ್ಬದ ಸಾರ್ವಜನಿಕ ರಜೆ ಇರಲಿದ್ದು, ಸೆಪ್ಟೆಂಬರ್ 11 ರ ಶುಕ್ರವಾರ ಸಿನಿಮಾ ರಿಲೀಸ್ ಮಾಡುವುದರಿಂದ ಸತತ 4 ದಿನಗಳ ಲಾಂಗ್ ವೀಕೆಂಡ್ ಲಾಭ ಚಿತ್ರಕ್ಕೆ ಸಿಗಲಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಹಬ್ಬದ ವಾತಾವರಣ ಇರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ.
ಸೀಕ್ವೆಲ್‌ನಲ್ಲಿ ಮುಂದುವರಿಯಲಿದೆ ಸ್ಟಾರ್ ತಾರಾಗಣ
2023 ರ ಬ್ಲಾಕ್‌ಬಸ್ಟರ್ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸೀಕ್ವೆಲ್‌ನಲ್ಲಿ ರಜನಿಕಾಂತ್ ಮತ್ತೊಮ್ಮೆ ‘ಟೈಗರ್ ಮುತ್ತುವೇಲ್ ಪಾಂಡಿಯನ್’ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಮೊದಲ ಭಾಗದಲ್ಲಿ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಮೋಹನ್‌ಲಾಲ್ ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ. ಇವರೊಂದಿಗೆ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಮತ್ತು ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಅವರ ಮ್ಯೂಸಿಕ್ ಚಿತ್ರಕ್ಕಿರಲಿದ್ದು, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಕ್ಯಾಮಿಯೋ ರೋಲ್ ಬಗ್ಗೆ ಇನ್ನು ಅಧಿಕೃತ ಮುದ್ರೆ ಬೀಳಬೇಕಿದೆ.



